ನಕಲಿ ವೈದ್ಯರ ತಡೆಗೆ ವಿಶೇಷ ಕಾನೂನು ರಚನೆ ಅಗತ್ಯ
ಲಿಂಗಸ್ಗೂರು ನ.24
ಇಂದಿನ ಆಧುನಿಕ ಯುಗದಲ್ಲಿ ವೈದ್ಯಕೀಯ ರಂಗ ಒಂದು ಸುಸಜ್ಜಿತ ಮತ್ತು ಉತ್ಕೃಷ್ಟ ವಿಜ್ಞಾನವಿದ್ದಂತೆ.
ಸಾಮಾಜಿಕ ಜ್ಞಾನಕ್ಕೆ ನಕಲಿ ವೈದ್ಯರನ್ನು ಸೃಷ್ಟಿಸುವುದು ಸಮಾಜಕ್ಕೆ ಮಾಡುವ ದ್ರೋಹವಾಗಿದೆ. ನಕಲಿ ವೈದ್ಯರ ಹಾವಳಿ ಸಂಪೂರ್ಣವಾಗಿ ತಡೆಗಟ್ಟಲು ವಿಶೇಷ ಕಾನೂನು ರಚನೆ ಮಾಡುವುದು ಅಗತ್ಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಯೋಗಾನಂದ ರೆಡ್ಡಿ ವೈಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂಗಸ್ಗೂರು ತಾಲೂಕು ಭಾರತೀಯ ವೈದ್ಯಕೀಯ ಸಂಘದ ಉತ್ತಮ ಸಾಧನೆ, ಚಟುವಟಿಗೆ ಗುರುತಿಸಿ ರಾಷ್ಟ್ರೀಯ ಪುರಸ್ಕಾರ ದೊರೆತ ಪ್ರಯುಕ್ತ ಪಟ್ಟಣದ ಐಎಂಎ ಸಭಾಂಗಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಪ್ರತಿ ಒಬ್ಬ ಅಸಲಿ ವೈದ್ಯರ ಪೈಕಿ ನಾಲ್ಕು ಜನ ನಕಲಿ ವೈದ್ಯರು ಹುಟ್ಟಿಕೊಂಡಿದ್ದು, ನಕಲಿ ವೈದ್ಯರನ್ನು ತಮ್ಮ ಅನುಕೂಲಕ್ಕಾಗಿ ಬೆಳೆಸಿದವರೇ ಅಸಲಿ ವೈದ್ಯರೇ ಆಗಿದ್ದಾರೆ.
ಇದರಿಂದ ಅಸಲಿ ವೈದ್ಯರ ಪ್ರಾಮಾಣಿಕ ಸೇವೆಗೆ ಅಡ್ಡಿಯಾಗಲಿದೆ. ನಕಲಿ ವೈದ್ಯರ ತಡೆಗಟ್ಟಲು ಕಾರ್ಯಚರಣೆ ನಡೆಯುತ್ತಿದೆ. ಇದಕ್ಕೆ ಭಾರತೀಯ ವೈದ್ಯಕೀಯ ಸಂಘ ಯಾವುದೇ ವಿರೋಧವಿಲ್ಲ. ಸಮಾಜದ ಹಿತಕ್ಕಾಗಿ ನಕಲಿ ವೈದ್ಯರನ್ನು ತಡೆಯುವುದು ಅಗತ್ಯವಾಗಿದೆ ಎಂದರು.
ವ್ಯಾಪಾರೀಕರಣ: ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ರಂಗ ವ್ಯಾಪಾರೀಕರಣವಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದ್ದು, ವೈದ್ಯರ ಮೇಲೆ ಸಮಾಜ ಕೆಂಗಣ್ಣು ಬೀರುವಂತಾಗಿದೆ. ಇಂತಹ ಅಪನಂಬಿಕೆ ದೂರವಾಗಿಸಲು ವೈದ್ಯರು ಆತ್ಮಸ್ಥೈರ್ಯ ಮತ್ತು ಸಮಾಜದ ಕಳಕಳಿ ತುಂಬಿ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತೊಡಗಬೇಕಿದೆ ಎಂದು ಕಿವಿಮಾತು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಕರವೀರ ಪ್ರಭು ಕ್ಯಾಲಕೊಂಡ ಮಾತನಾಡಿ, ಇತ್ತಿಚೆಗೆ ವೈದ್ಯರ ಮೇಲೆ ದೌರ್ಜನ್ಯ, ಹಲ್ಲೆಗಳ ಪ್ರಕರಣ ಹೆಚ್ಚುತ್ತಿದ್ದು, ತೊಂದರೆಯಾದಾಗ ವೈದ್ಯರು ಸಂಘಟಿತರಾಗಿ ಎದುರಿಸಬೇಕಿದೆ.
ವೈದ್ಯರ ಸಮಸ್ಯೆ, ತೊಂದರೆಗಳ ಪರಿಹಾರಕ್ಕೆ ಸಂಘದಿಂದ ಕಾರ್ಯ ಚಟುವಟಿಕೆ ರೂಪಿಸಬೇಕಿದೆ.
ಈ ನಿಟ್ಟಿನಲ್ಲಿ ವೈದ್ಯರು ಎದುರಿಸುವ ಸಮಸ್ಯೆ, ತೊಂದರೆಗಳ ಕುರಿತು ಮಾಹಿತಿ ಪಡೆಯಲು ಗಂಗಾವತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಡಾ. ಶಿವಬಸಪ್ಪ ಹೆಸರೂರ, ಸಂಘದ ಮಾಜಿ ಅಧ್ಯಕ್ಷ ಡಾ.ಎಂ.ವಿ. ಜೋಷಿ, ಕಾರ್ಯದರ್ಶಿ ಡಾ.ಅಮರೇಗೌಡ ಪಾಟೀಲ್, ಮಾಜಿ ಕಾರ್ಯದರ್ಶಿ ಡಾ.ಜಿ.ಆರ್.ದೇಶಪಾಂಡೆ, ವೈದ್ಯರಾದ ಡಾ.ಶ್ರೀಶೈಲ ಅಮರಖೇಡ ರಾಯಚೂರು, ಡಾ.ವಿಜಯಕುಮಾರ ಸೇರಿದಂತೆ ಉಪಸ್ಥಿತರಿದ್ದರು.
ಸನ್ಮಾನ: ಭಾರತೀಯ ವೈದ್ಯಕೀಯ ಸಂಘದಿಂದ ನೀಡಲಾದ ರಾಷ್ಟ್ರೀಯ ಪ್ರಶಸ್ತಿಯನ್ನು ರಾಜ್ಯಾಧ್ಯಕ್ಷ ಡಾ. ಯೋಗಾನಂದ ರೆಡ್ಡಿ ತಾಲೂಕು ಭಾರತೀಯ ಸಂಘದ ಅಧ್ಯಕ್ಷ ಡಾ. ಶಿವಬಸಪ್ಪ ಹೆಸರೂರು ಅವರಿಗೆ ಅರ್ಪಿಸಲಾಯಿತು. ನಂತರ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಯೋಗಾನಂದ ರೆಡ್ಡಿ ವೈಸಿ, ಉಪಾಧ್ಯಕ್ಷ ಡಾ.ಕರವೀರಪ್ರಭು ಕ್ಯಾಲಕೊಂಡ, ನಿಕಟಪೂರ್ವ ಅಧ್ಯಕ್ಷ ಡಾ.ಎಂ.ವಿ. ಜೋಷಿ ಹಾಗೂ ಮಾಜಿ ಕಾರ್ಯದರ್ಶಿ ಡಾ.ಜಿ.ಆರ್. ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು.
---