ಪಡಿತರ ಧಾನ್ಯ ಕಳ್ಳತನ, ಕ್ರಮಕ್ಕೆ ಒತ್ತಾಯ
ಸಿಂಧನೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ದಲಿತ ರಕ್ಷಣಾ ವೇದಿಕೆ ಗುಲ್ಬರ್ಗ ವಿಭಾಗೀಯ ಅಧ್ಯಕ್ಷ ಹನುಮಂತ ಹಂಚಿನಾಳ.ಕೆ. ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ, ಕರ್ತವ್ಯಲೋಪ, ಬೇಜವಾಬ್ದಾರಿತನ ಮಿತಿಮೀರಿದೆ. ಅದಕ್ಕೆ ಮೇಲಿಂದ ಮೇಲೆ ನಡೆದ ಅಕ್ಕಿ ಕಳ್ಳಸಾಗಾಣಿಕೆ ಪ್ರಕರಣಗಳೇ ಸಾಕ್ಷಿ. ಇದರಲ್ಲಿ ಆಹಾರ ಇಲಾಖೆ ಶಿರಸ್ತೇದಾರ ಆನಂದ, ಉಗ್ರಾಣ ವ್ಯವಸ್ಥಾಪಕ ಮಲ್ಲಿಕಾರ್ಜುನ, ಆಹಾರ ನಿರೀಕ್ಷಕ ಜಾನಿಮಿಯಾ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಸಿಂಧನೂರಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೇ ಭ್ರಷ್ಟಾಚಾರದ ಗೂಡಾಗಿದ್ದು, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ತಾಲೂಕಿನ ಕೆ. ಹಂಚಿನಾಳ ಕ್ಯಾಂಪ್, ಗೊರೇಬಾಳ, ಭೀಮರಾಜ ಕ್ಯಾಂಪ್ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಒಬ್ಬ ವ್ಯಕ್ತಿಗೆ ನೀಡಲಾಗಿದೆ. ಸುಮಾರು 10-12 ವರ್ಷಗಳಿಂದ ಸಿಂಧನೂರಿನಲ್ಲಿಯೇ ಠಿಕಾಣಿಹೂಡಿರುವ ಆಹಾರ ಇಲಾಖೆ ಶಿರಸ್ತೆದಾರ ಆನಂದ ನ್ಯಾಯಬೆಲೆ ಅಂಗಡಿ ಸಂಚಾಲಕರನ್ನು ಬುಟ್ಟಿಗೆ ಹಾಕಿಕೊಂಡು ಕಾಳಸಂತೆಗೆ ರಾಜಾರೋಷವಾಗಿ ಅಕ್ಕಿ ಸಾಗಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಪಡಿತರಧಾನ್ಯ ಅಕ್ರಮ ಸಾಗಾಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆ. ರಾಘವೇಂದ್ರ ಸೋಮಲಾಪುರ, ಜಿಲ್ಲಾಧ್ಯಕ್ಷ ರಮೇಶ ಜಂಗಮರ ಹಟ್ಟಿ, ಯಮನೂರಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.