ಹೊಲ ರಿಜಿಸ್ಟ್ರೇಷನ್ ವಿಳಂಬ: ಜಮೀನು ಮಾಲೀಕರ ಅಲೆದಾಟ
ಸಿಂಧನೂರು: ತಾಲೂಕಿನ ಬನ್ನಿಗನೂರು ಗ್ರಾಮ ಸಮೀಪದ ಬಸವಣ್ಣ ಕ್ಯಾಂಪಿನ ಸರ್ವೆ ನಂ.55ರ 5ಎಕರೆ ಹೊಲಕ್ಕೆ ಸಂಬಂಧಿಸಿದ ಸರ್ವೆ ವರದಿ ನೀಡಲು ತಹಶೀಲ್ದಾರ್ ಕಚೇರಿಯ ಸರ್ವೆ ಅಧಿಕಾರಿಯೊಬ್ಬರಿಂದ ವಿಳಂಬ ಹಿನ್ನೆಲೆಯಲ್ಲಿ ತಾವು ಮಾರಾಟ ಮಾಡಿದ ಹೊಲ ಖರೀದಿದಾರರಿಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಲಾಗದೆ ಕುಟುಂಬವೊಂದು ಪ್ರತಿ ದಿನ ಅಲೆದಾಡುತ್ತಿದೆ.
ಸಾಲ ತೀರಿಸಲು ಮಾರಾಟ: ಸರ್ವೆ ನಂ.55ರ ಮಾಲಿಕರಾದ ಸಿ.ಎಚ್. ವೆಂಕಟೇಶ್ವರ ರಾವ್, ತಮ್ಮ ಹೆಸರಿನಲ್ಲಿರುವ ಒಟ್ಟು 5 ಎಕರೆ ಜಮೀನಿನಲ್ಲಿ ಎರಡೂವರೆ ಎಕರೆ ಜಮೀನನ್ನು ಸೂರ್ಯನಾರಾಯಣರಾವ್ ಎನ್ನುವವರಿಗೆ 5ನೇ ಜೂನ್ 2013ರಂದು ಮಾರಾಟ ಮಾಡಿ ತಾವು ಮಾಡಿದ ಸಾಲ ಕಟ್ಟುವ ಉದ್ದೇಶ ಹೊಂದಿದ್ದರು. ಅದಕ್ಕಾಗಿ ತಹಶೀಲ್ದಾರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸರ್ವೆ ಅಧಿಕಾರಿ ಶಿವಕುಮಾರ ಅವರ ಬಳಿ ಹೋಗಿ ತಮ್ಮ ಹೊಲವನ್ನು ಸರ್ವೆ ಮಾಡಿ ಮಾಡಿ ವರದಿ ಕೊಟ್ಟರೆ ಖರೀದಿದಾರರ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತೇವೆಂದು ವಿನಂತಿಸಿದ್ದಾರೆ.
ಗೋಳಾಟ: ಸರ್ವೆ ಮಾಡಿದ ವರದಿ ಮಾತ್ರ ತಹಸೀಲ್ದಾರ್ ಕಚೇರಿಗೆ ಸಲ್ಲಿಸದೆ, ಇನ್ನೂ ರು. 4ಸಾವಿರ ಹಣ ಕೇಳುತ್ತಾ ಪ್ರತಿ ದಿನ ಕಚೇರಿಗೆ ಅಲೆಸುತ್ತಿದ್ದಾರೆ ಎಂದು ಜಮೀನು ಮಾಲೀಕ ವೆಂಕಟೇಶ್ವರಾವ್ ತಾಯಿ ಸಿ.ಎಚ್.ರತ್ನಮ್ಮ ಗೋಳಾಡುತ್ತಿದ್ದಾರೆ.
ಹೀಗೆ ಕಚೇರಿಗೆ ಅಲೆದಾಡಿಸಿದರೆ ಶಿವಕುಮಾರ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.