ಅವ್ಯವಹಾರ: ಕ್ರಮಕ್ಕೆ ಒತ್ತಾಯ
ರಾಯಚೂರು: ನಗರದ ತಹಸೀಲ್ದಾರ್ ಕಚೇರಿಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಇಲಾಖೆಯವರಲ್ಲದ ವ್ಯಕ್ತಿಗಳು ವಿವಿಧ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ದಾರಿಯಾಗಿದೆ. ಕಾರಣ ಅಂಥ ಇಲಾಖೆಗೆ ಸಂಬಂಧವಿಲ್ಲದಂಥ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನಸಂಗ್ರಾಮ ಪರಿಷತ್ ಒತ್ತಾಯಿಸಿದೆ.
ಈ ಕುರಿತು ಸಹಾಯದ ಆಯುಕ್ತರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಮುಖಂಡ ಸೈಯದ್ ಶಂಶುದ್ದೀನ್, ನೆಮ್ಮದಿ ಕೇಂದ್ರದ ಶಿರಸ್ತೇದಾರ ವಿಜಯೇಂದ್ರ ಎಂಬುವವರು ಕೇಂದ್ರದಲ್ಲಿ ತಮ್ಮ ಪರವಾಗಿ ಪವನಕುಮಾರ್ ಮತ್ತು ಸುರೇಶಕುಮಾರ್ ಎಂಬುವವರನ್ನು ಏಜೆಂಟರಾಗಿ ನೇಮಿಸಿಕೊಂಡಿದ್ದಾರೆ. ಅವರ ಮೂಲಕ ಅಕ್ರಮಕ್ಕೆ ದಾರಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗೆ ಸಂಬಂಧವಿಲ್ಲದ ಇಬ್ಬರೂ ಪ್ರಮಾಣಪತ್ರಗಳನ್ನು ಯಾವುದೇ ದಾಖಲೆಗಳಿಲ್ಲದೆಯೇ ಪಡೆದು ಮಾರಾಟಕ್ಕಿರಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಇಲಾಖೆ ಬಗ್ಗೆ ಜನತೆಗೆ ಅನುಮಾನ ಮೂಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೂಡಲೇ ಸಹಾಯಕ ಆಯುಕ್ತರು ಈ ಬಗ್ಗೆ ಗಮನಹರಿಸಿ ಅವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.