ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಎಸ್ಪಿ ನಾಗರಾಜ್
ಕ.ಪ್ರ.ವಾರ್ತೆ ರಾಯಚೂರು ನ.25
ಬೆಂಗಳೂರಿನ ಎಟಿಎಂ ನಲ್ಲಿ ನಡೆದ ಮಹಿಳೆ ಮೇಲಿನ ಹಲ್ಲೆ ಪ್ರಕರಣದಿಂದ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್ ಇಲಾಖೆಯು ಕೊನೆಗೂ ಜಿಲ್ಲೆಯಲ್ಲಿರುವ ಎಲ್ಲ 95 ಎಟಿಎಂಗಳಿಗೆ ಮುಂದಿನ ಎಂಟು ದಿನಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.
ನಗರದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಎಸ್ಪಿ ಎಂ.ಎನ್.ನಾಗರಾಜ್, 50ಎಟಿಎಂ ಗಳಿಗೆ ಎಂಟು ದಿನಗಳಲ್ಲಿ ಸೆಕ್ಯುರಿಟಿ ಗಾರ್ಡ್ ನೇಮಿಸಬೇಕೆಂದು ಸೂಚನೆ ನೀಡಿದರು.
ಭದ್ರತೆ: ರಾಷ್ಟ್ರೀಕೃತ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಸೇರಿ ಜಿಲ್ಲೆಯಲ್ಲಿ ಒಟ್ಟು 95 ಎಟಿಎಂಗಳಿವೆ. ಅವುಗಳಲ್ಲಿ 45 ಎಟಿಎಂಗಳಿಗೆ ಮಾತ್ರ ಭದ್ರತೆಯಿದೆ. ಆದರೆ ಇನ್ನುಳಿದ 50 ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿಯಿಲ್ಲ. ಕೂಡಲೇ ಭದ್ರತೆ ಒದಗಿಸುವತ್ತ ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ಬೆಂಗಳೂರಿನಲ್ಲಿ ಈಚೆಗೆ ಮಹಿಳೆ ಮೇಲೆ ಎಟಿಎಂನಲ್ಲಿ ನಡೆದ ದಾಳಿಯ ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಟಿಎಂಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದು, ಪೊಲೀಸ್ ಇಲಾಖೆಯ ಕಾಯಿದೆ 144ಕಲಂ ನ ಉಪ ಕಲಂ 1,2 ಮತ್ತು 3ರಂತೆ ಸೂಚನೆ ನೀಡಿದೆ ಎಂದು ವಿವರಿಸಿದರು.
ಕರೆಗಂಟೆ ವ್ಯವಸ್ಥೆ: ಜಿಲ್ಲೆಯ ಎಲ್ಲ ಬ್ಯಾಂಕುಗಳ ಎಟಿಎಂ ಗಳಲ್ಲಿ ಕಡ್ಡಾಯವಾಗಿ ಕಾವಲುಗಾರನನ್ನು ನೇಮಿಸಬೇಕು. ಸ್ಪಷ್ಟ ಚಿತ್ರಣ, ಹೆಚ್ಚು ದಾಖಲೆ ಸಾಮರ್ಥ್ಯವಿರುವ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಎಟಿಎಂಗಳಲ್ಲಿ ಅಹಿತಕರ ಘಟನೆ ಸಂಭವಿಸಿದಲ್ಲಿ ಎಚ್ಚರಿಕೆ ಕರೆಗಂಟೆ ಮೊಳಗಿಸುವ ವ್ಯವಸ್ಥೆಯಿರಬೇಕು. ಈ ಎಲ್ಲ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಕಾಲದಿಂದ ಕಾಲಕ್ಕೆ ಪರೀಕ್ಷಿಸುತ್ತಿರಬೇಕೆಂದು ನಗರದ ಸದರ್ ಬಜಾರ್ ಠಾಣೆಯ ಸಿಪಿಐ ಚಂದ್ರಶೇಖರ್ ಸಭೆಯಲ್ಲಿ ಹೇಳಿದರು.
ಎಸ್ಬಿಎಚ್ ಎಟಿಎಂಗಳಿಗೆ ಭದ್ರತೆ ಸಿಬ್ಬಂದಿಯಿಲ್ಲದ ಬಗ್ಗೆ ವಿಷಯ ಪ್ರಸ್ತಾಪವಾಗಿ ಎಸ್ಬಿಎಚ್ ಸ್ಟೇಷನ್ ರಸ್ತೆ ಶಾಖೆಯ ಅಧಿಕಾರಿ ಸಭೆಯಲ್ಲಿ ಮಾತನಾಡಿ, ಬ್ಯಾಂಕಿನ ಎಟಿಎಂ ಗಳಿಗೆ ಕಾವಲುಗಾರನನ್ನು ನೇಮಿಸುವುದು ಬ್ಯಾಂಕಿನ ನಿಯಮಗಳ ಪ್ರಕಾರ ಅಸಾಧ್ಯ ಎಂದರು. ಕೂಡಲೇ ಮಧ್ಯಪ್ರವೇಶಿಸಿದ ಎಸ್ಬಿಎಚ್ ಲೀಡ್ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಕೆ. ಮುರಳಿ ಮಾತನಾಡಿ ಸೆಕ್ಯೂರಿಟಿ ಗಾರ್ಡ್ ನೇಮಿಸುವ ಕುರಿತು ಸಂಬಂಧಿಸಿದ ಬ್ಯಾಂಕಿನ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಡಿಎಸ್ಪಿ ಎಂ.ಪಾಷಾ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳಿದ್ದರು.