ಲಿಂಗಸ್ಗೂರು ಪುರಸಭೆ ಆಡಳಿತವೀಗ ಹೈಟೆಕ್!
ಕನ್ನಡಪ್ರಭವಾರ್ತೆ ಲಿಂಗಸ್ಗೂರು ನ.25
ಹಲವು ಅಕ್ರಮಗಳ ಮಡಿಲಲ್ಲಿರಿಸಿಕೊಂಡು ಅದ್ವಾನವಾಗಿದ್ದ ಪುರಸಭೆ ಚಿತ್ರಣ ನಿಧಾನ ಬದಲಾಗಿ ಅಭಿವೃದ್ಧಿ ಸಂಕಲ್ಪದೊಂದಿಗೆ ಹೈಟೆಕ್ ಆಡಳಿತದತ್ತ ಮುಖ ಮಾಡಿದೆ. ರಾಜ್ಯದಲ್ಲಿಯೇ ಗಣಕೀಕೃತ ಆಡಳಿತ ವ್ಯವಸ್ಥೆ ಹೊಂದಿದ ಕೀರ್ತಿಗೆ ಲಿಂಗಸ್ಗೂರು ಪುರಸಭೆ ಭಾಜನವಾಗಿದೆ.
ಆಡಳಿತದಲ್ಲಿ ಸುಧಾರಣೆ ತರಲು ಮೊದಲು ನಾಗರೀಕ ಸೌಲಭ್ಯ, ಉದ್ಯಾನವನ ಜಾಗಗಳು ಸೇರಿದಂತೆ ಸರಕಾರಿ ಭೂಮಿ ಕಬಳಿಕೆ ತಡೆಗಟ್ಟಲು ಆಸ್ತಿ ವರ್ಗಾವಣೆ ದಾಖಲೆಗಳು ನಾಲ್ಕಾರು ಸಿಬ್ಬಂದಿ ಪರಿಶೀಲನೆ ನಂತರ ದೃಢಪಡಿಸಿದ ರುಜು ಮಾಡಿದ ಆಸ್ತಿ ವರ್ಗಾವಣೆ, ಮಾರಾಟ ಸೇರಿದಂತೆ ವ್ಯವಹಾರಗಳಿಗೆ ಅವಕಾಶ ನೀಡಲು ಮುಂದಾಯಿತು. ಇದಕ್ಕಾಗಿ ಪುರಸಭೆ ಸಿಬ್ಬಂದಿ ಒಗ್ಗೂಡಿ ಕಾರ್ಯ ಮಾಡಲು ಮುಂದಾದರು. ಸದಸ್ಯರ ತಾಳಕ್ಕೆ ತಕ್ಕಂತೆ ಕುಣಿದರೆ ಉಳಿಗಾಲವಿಲ್ಲ ಎಂಬುದನ್ನು ಅರಿತ ನೌಕರರು ಸರ್ಕಾರದ ನಿಮಯದಂತೆ ಕಾರ್ಯ ಮಾಡಬೇಕೆಂಬ ಬಗ್ಗೆ ನಿರ್ಧಾರಕ್ಕೆ ಬಂದು ಅನುದಾನ ಬಿಡುಗಡೆ, ಬಳಕೆ, ಕಾಮಗಾರಿ, ಕಡತಗಳ ರವಾನೆ ಸೇರಿದಂತೆ ವ್ಯಾಪಕ ಪರಿಶೀಲನೆ ನಂತರವಷ್ಟೇ ಮಂಜೂರಿ ಮಾಡಲಾಗುತ್ತಿತ್ತು. ಕಟ್ಟುನಿಟ್ಟಿನ ಆಡಳಿತದ ವೈಖರಿ ಅನೇಕರಿಗೆ ಇರುಸು-ಮುರುಸಾಯಿತು.
ಟೆಂಡರ್ ಕಾಮಗಾರಿ ಪಟ್ಟಣದ ಮಹಾಂತೇಶ್ವರ ಮಠಕ್ಕೆ ಸಂಪರ್ಕ ಕಲ್ಲಿಸುವ ಸೇತುವೆ ನಿರ್ಮಾಣಕ್ಕೆ ರು. 1 ಕೋಟಿ ಅನುದಾನದಲ್ಲಿ ಕಾಮಗಾರಿ ಟೆಂಡರ್ ಕರೆಯಲಾಗಿದೆ. ಅಲ್ಲದೇ ಒಟ್ಟು 7 ಉದ್ಯಾವನಗಳ ಅಭಿವೃದ್ಧಿಗೆ ರು. 38 ಲಕ್ಷ ಪಟ್ಟಣದಲ್ಲಿ ಪ್ರಮುಖ 5 ರಸ್ತೆಗಳಲ್ಲಿ ರು. 25 ಲಕ್ಷ ವೆಚ್ಚದಲ್ಲಿ ಸ್ವಾಗತ ಕಮಾನುಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಸಂಗಮೇಶ್ವರ ಪದವಿ ಕಾಲೇಜು ಬಳಿ ರು. 1 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಭವನದ ನಿರ್ಮಾಣ ನಗರೋತ್ಥಾನ ಯೋಜನೆಯಡಿ ರು. 5 ಕೋಟಿ ಹಣದಲ್ಲಿ ರಸ್ತೆ ಅಭಿವೃದ್ಧಿ, ಚರಂಡಿಗಳ ನಿರ್ಮಾಣ ಮಾಡಲಾಗುತ್ತದೆ.
ವಿದ್ಯುತ್ ದೀಪ: ಪಟ್ಟಣದಲ್ಲಿ ಒಟ್ಟು 2303 ವಿದ್ಯುತ್ ದೀಪಗಳಿದ್ದು, 1,07,716 ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ಇದಕ್ಕಾಗಿ ಮಾಸಿಕ ರು. 6,89,382 ವ್ಯಯಿಸಲಾಗುತ್ತದೆ. ವಿದ್ಯುತ್ ಕೊರತೆ ನೀಗಿಸಲು ದಲಿತ ಕಾಲೊನಿಯಲ್ಲಿ ಸೋಲಾರ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ ಪರಿಶಿಷ್ಟ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗಲು ಸೋಲಾರ ಎಲ್ಇಡಿ ದೀಪಗಳು ನೀಡಲಾಗಿದೆ.
ಹೈಟೆಕ್ ಹೆಗ್ಗಳಿಕೆ: ಸಿಬ್ಬಂದಿ ಕೊರತೆ ನಿಗಿಸಿ ಕೈಬಹರ ಮತ್ತು ಹಾಳೆಯಲ್ಲಿ ಬರೆಯುವುದರಿಂದ ಕಡತಗಳಲ್ಲಿ ಲೋಪ-ದೋಷಗಳಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಗಣಕೀಕೃತ ಆಡಳಿತ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಕಡತಗಳ ನಕಲು, ಸರಳ ಮತ್ತು ಸರಿಯಾದ ವರದಿ, ಕಚೇರಿ ಕಡತಗಳ ಸುರಕ್ಷತೆ ಕಾಪಾಡುವ ಜೊತೆಗೆ ಗ್ರಾಹಕರಿಗೆ ಅತ್ಯಂತ ಮತ್ತು ಅಗತ್ಯಕ್ಕೆ ತಕ್ಷಣ ಮಾಹಿತಿ ದೊರೆಯುತ್ತದೆ. ಇದರಿಂದ ಸಮಯದ ಉಳಿತಾಯ ಮತ್ತು ಆಡಳಿತಕ್ಕೆ ಲಾಭವಾಗಲಿದೆ ಮತ್ತು ಗಣಿಕೀಕೃತ ವ್ಯವಸ್ಥೆಯಲ್ಲಿ ಆಸ್ತಿ ತೆರಿಗೆ, ನೀರಿನ ಕರ, ಹಣ ಸಂಗ್ರಹಣಾ ಪದ್ಧತಿ (ಏಕ ಗವಾಕ್ಷಿ), ಪ್ರಭಾವಶಾಲಿ ಅಂತರ್ಜಾಲ ತಾಣಗಳಿಂದ ಗ್ರಾಹಕರು ಮತ್ತು ಸಿಬ್ಬಂದಿಗೆ ಅನುಕೂಲವಾಗಲಿದೆ.
ವಿಭಾಗಗಳು: ಗಣಕೀಕೃತ ಆಡಳಿತಕ್ಕೆ ಅನುಕೂಲವಾಗಲು ಆಡಳಿತ, ಲೆಕ್ಕಾಚಾರ, ನಗದು ಹಣ ಪಾವತಿ ಸೇರಿದಂತೆ ಆಸ್ತಿ ತೆರಿಗೆ ಪಾವತಿ ಬಾಕಿ, ಚಾಲ್ತಿ ಅಲ್ಲದೇ ಆಸ್ತಿಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದ ಮೂಲಕ ತಮ್ಮ ಮನೆಯ ಮಾಹಿತಿ ಪಡೆಯಬಹುದಾಗಿದೆ. ನೀರಿನ ತೆರಿಗೆಯ ಚಾಲ್ತಿ, ಬಾಕಿ ಮಾಹಿತಿ ಪಡೆಯಬಹುದಾಗಿದೆ ಜಿಪಿಆರ್ಎಸ್ ತಂತ್ರಜ್ಞಾನದಿಂದ ಸ್ಟಾರ್ಟ್ ಬಿಲ್ಲಿಂಗ್ ವ್ಯವಸ್ಥೆಯಿದ್ದು, ಎಲ್ಲ ನಳಗಳ ಬಗ್ಗೆ ಒಂದೇ ಜಾಗದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಎಸ್ಬಿಎಂ ಯಂತ್ರದ ಸಹಾಯದಿಂದ ಗ್ರಾಹಕರಿಗೆ ಬಿಲ್ ನೀಡಲಾಗುತ್ತದೆ. ಗಣಕೀಕೃತ ಆಡಳಿತದಲ್ಲಿ ಸಂಪೂರ್ಣ ಮಾಹಿತಿ ತಕ್ಷಣ ಲಭ್ಯವಾಗಲಿದೆ. ಆಸ್ತಿಗೆ ಸಂಬಂಧಿಸಿದಂತೆ ಏನೇ ಬದಲಾವಣೆ ಮಾಡಬೇಕಾದರೆ ಇದಕ್ಕೆ ಮುಖ್ಯಾಧಿಕಾರಿಗಳು ಹೆಬ್ಬರಳಿನ ಸಹಿ ಅಗತ್ಯವಾಗಿದೆ. ಅಲ್ಲದೆ ಇದಕ್ಕೆ ಗುಪ್ತವಾದ ಸಂಕೇತ ಸಂಖ್ಯೆ ಇರುತ್ತದೆ. ಇದರಿಂದ ಅಸಲಿ ಕಡತಗಳ ನಕಲು ತಡೆಯಬಹುದಾಗಿದೆ. ಕರ ವಸೂಲಿಗಾರರು ಸಂಗ್ರಹಿಸಿ ತೆರೆಗೆ ಹಣದ ಲೆಕ್ಕ ಸಿಗುತ್ತದೆ.
ಅನುದಾನ ಬಳಕೆ: 2005 ರಿಂದ 2013ರವರೆಗೆ ಎಸ್ಎಫ್ಸಿ ಮುಕ್ತನಿಧಿಯಡಿ 2005-06ರಲ್ಲಿ ಪುರಸಭೆಗೆ ಬಿಡುಗಡೆಯಾದ ಅನುದಾನ ರು. 41.71 ಲಕ್ಷ ಬಿಡೆಗಡೆಯಾದ 2 ಕಿಮೀ ರಸ್ತೆ 600 ಮೀಟರ್ ರಸ್ತೆ ನಿರ್ಮಿಸಲಾಗಿದೆ. 2006-07 ಸಾಲಿನಲ್ಲಿ ರು. 75.77 ಲಕ್ಷ ಪೂರ್ಣ ಖರ್ಚಾಗಿದೆ. 2007-08ರಲ್ಲಿ ರು. 290.4 ಲಕ್ಷ ಪೂರ್ಣ ಅನುದಾನ ಖರ್ಚಾಗಿದೆ. 2008-09ರಲ್ಲಿ ರು. 276.25 ಲಕ್ಷ ಬೇಡಿಕೆ ಸಲ್ಲಿಸಿದ್ದು, 175.25 ಲಕ್ಷ ಹಣ ಖರ್ಚಾಗಿದೆ. 2009-10ರಲ್ಲಿ ರು. 223.29 ಲಕ್ಷ ಬೇಡಿಕೆಯಿದ್ದು, ರು. 80 ಲಕ್ಷ ಖರ್ಚಾಗಿದೆ. ರು. 195 ಲಕ್ಷ ಬಾಕಿ ಇದೆ. 2010-11ರಲ್ಲಿ ರು. 223.29 ಲಕ್ಷ ಬೇಡಿಕೆ ಸಲ್ಲಿಸಿದ್ದು, ರು. 195.9 ಲಕ್ಷ ಬಾಕಿ ಇದ್ದು, ರು. 70 ಲಕ್ಷ ಖರ್ಚಾಗಿದೆ. 2011-12 ರಲ್ಲಿ ರು. 245.16 ಲಕ್ಷ ಬೇಡಿಕೆಯಲ್ಲಿ 70 ಲಕ್ಷ ಖರ್ಚಾಗಿದ್ದು, ರು. 162.09 ಲಕ್ಷ ಬಾಕಿ ಇದೆ. 2012-13ನೇ ಸಾಲಿನ 260.67 ಬೇಡಿಕೆ ಇದ್ದು, ಇದರಲ್ಲಿ ರು. 122.32 ಲಕ್ಷ ಬಾಕಿ ಇದೆ. ಬಿಡುಗಡೆಯಾದ ರು. 130.32 ಹಣ ಖರ್ಚಾಗಿದೆ. ಇದರಲ್ಲಿ ಚರಂಡಿ, ರಸ್ತೆ, ಆಸ್ತಿಗಳ ನಿರ್ವಹಣೆಗೆ ಸೃಜಿಸಲಾಗಿದೆ.
ಸಿಬ್ಬಂದಿ ಸಂಖ್ಯೆ: ಪುರಸಭೆಯಲ್ಲಿ ಒಟ್ಟು 95 ವಿವಿಧ ಹುದ್ದೆಗಳಿದ್ದು, ಇದರಲ್ಲಿ ಮುಖ್ಯಾಧಿಕಾರಿ ಸೇರಿದಂತೆ ಒಟ್ಟು 43 ಸಿಬ್ಬಂದಿಗಳಿದ್ದಾರೆ. 53 ವಿವಿಧ ಹುದ್ದೆಗಳು ಖಾಲಿ ಇರುತ್ತವೆ.
ಮುಖ್ಯಾಧಿಕಾರಿ ಸ್ಪಷ್ಟನೆ: ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಆದಾಯ ಸೋರಿಕೆ ತಡೆಗಟ್ಟಿ ಕೊರತೆಯ ಸಿಬ್ಬಂದಿಗಳ ನಡುವೆ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಗಣಕೀಕೃತ ಆಡಳಿತ ವ್ಯವಸ್ಥೆಗೆ ಸಂಕಲ್ಪ ಜಾರಿ ಮಾಡಲಾಗಿದೆ.
ಅಲ್ಲದೆ ಪುರಸಭೆಗೆ ನಾನು ಮುಖ್ಯಾಧಿಕಾರಿಯಾಗುವ ಮೊದಲು ಪುರಸಭೆ ಖಾತೆಯಲ್ಲಿ ಕೇವಲ ರು. 25 ಸಾವಿರ ಹಣವಿತ್ತು. ಹಣ ಕೊರತೆಯಿಂದ ಆಡಳಿತ ನಡೆಸುವುದೇ ಕಷ್ಟಕರವಾಗುತ್ತಿತ್ತು. ಅನೇಕ ಎಡರು-ತೊಡರುಗಳನ್ನು ಮೆಟ್ಟಿ ಜನರ ಸಹಕಾರದಿಂದ ಇಂದು ಪುರಸಭೆ ಖಾತೆಯಲ್ಲಿ ರು. 60 ಲಕ್ಷ ಹಣ ಜಮಾ ಆಗಿದೆ. ಅಭಿವೃದ್ಧಿ ಮತ್ತು ಮಾದರಿ ಆಡಳಿತ ನೀಡಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ಪತ್ರಿಕೆಗೆ ತಿಳಿಸಿದರು.
ಅಮರೇಶಸ್ವಾಮಿ ಬಲ್ಲಟಗಿ