ಸರ್ಕಾರಕ್ಕೆ ಮರು ಪ್ರಸ್ತಾವನೆಗೆ ನಿರ್ಧಾರ
ಕನ್ನಡಪ್ರಭ ವಾರ್ತೆ ರಾಯಚೂರು ನ.25
ಹತ್ತಾರು ಸಭೆಗಳ ನಂತರವೂ ಮುಂದುವರಿದ ದಿಕ್ಕು ದೆಸೆಯಿಲ್ಲದ ಚರ್ಚೆ. ಮತ್ತದೇ ಹಳೆಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ. 22 ಜನ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಗೆ ಮತ್ತೆ ನೋಟೀಸ್ ನೀಡುವ ಎಚ್ಚರಿಕೆ. ಇವೆಲ್ಲದರ ಮಧ್ಯೆ ನಂದ ವಾಡಗಿ ಏತ ನೀರಾವರಿ ಯೋಜನೆಯಡಿ 1 ಟಿಎಂಸಿ ನೀರು ಬಳಕೆಗೆ ಪೂರಕ ಕ್ರಮಕ್ಕೆ ಪುನಾ ಪ್ರಸ್ತಾವನೆ ಸಲ್ಲಿಕೆಗೆ ಜಿಪಂ ಒಕ್ಕೊರಲ ನಿರ್ಧಾರ.
ನಗರದಲ್ಲಿ ಸೋಮವಾರ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯವಿದು.
ಸಭೆಯ ಆರಂಭದಲ್ಲಿಯೇ ಅಧ್ಯಕ್ಷೆ ಲಲಿತಮ್ಮ ಮಾತನಾಡಿ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲೆಯ ಅಧಿಕಾರಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಹೈ.ಕ. ಭಾಗದಲ್ಲಿಯೇ ರಾಯಚೂರು ಜಿಪಂ ಮೊದಲ ಸ್ಥಾನದಲ್ಲಿದೆ ಎಂದು ಅಭಿನಂದಿಸಿದರು.
ಗೈರು: ನಂತರ ನಡೆದ ಚರ್ಚೆಯಲ್ಲಿ ಅಧಿಕಾರಿಗಳು ಜಿಪಂನಲ್ಲಿ ನಡೆಯುವ ಬಹುತೇಕ ಎಲ್ಲ ಸಭೆಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ವಿಚಾರ ಚರ್ಚಿಸುವುದು ವ್ಯರ್ಥ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಪಂ ಅಸಹಾಯಕವಾಗಿದೆಯೇ ಎಂದು ಸದಸ್ಯರಾದ ಜಾಫರ್ ಅಲಿ ಪಟೇಲ್, ಅಸ್ಲಂ ಪಾಷಾ ಮತ್ತಿತರರು ಪ್ರಶ್ನಿಸಿದರು.
ಕಳೆದ ಅನೇಕ ಸಭೆಗಳಿಗೆ ಅಧಿಕಾರಿಗಳು ಇಲ್ಲಸಲ್ಲದ ಕಾರಣಮೊಡ್ಡಿ ಗೈರು ಹಾಜರಾಗುತ್ತಿದ್ದಾರೆ. ಇದು ಜಿಲ್ಲೆಯೆಡೆಗೆ ಅವರ ಕಾಳಜಿ ಪ್ರದರ್ಶಿಸುತ್ತದೆ. ಇಂಥ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ವರ್ಗಾವಣೆಗೆ ಸರ್ಕಾರಕ್ಕೆ ಮನವಿ ಮಾಡುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂದಿತು.
ನೋಟೀಸ್: ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ.ಮುದ್ದುಮೋಹನ್, ಅಂಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಸದ್ಯದ ಸಭೆಗೆ ಗೈರಾಗಿದ್ದಕ್ಕೆ ಕಾರಣ ಕೇಳಿ ನೋಟೀಸ್ ಈ ಬಾರಿಯೂ ಜಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ನಂತರ ನಡೆದ ಚರ್ಚೆಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಜಿಪಂ ನಿಂದ ವಹಿಸಿದ ವಿವಿಧ ಕಾಮಗಾರಿಗಳ ಪ್ರಗತಿ ಕುಂಠಿತಗೊಂಡಿದೆ. ನಿರ್ಮಿತಿ ಕೇಂದ್ರಕ್ಕೆ ಜಿಪಂ ನಿಂದ ಅನುದಾನ ಬಿಡುಗಡೆಯಾಗಿದ್ದು, ಕೇಂದ್ರದಲ್ಲಿ ನಡೆದ ಅಕ್ರಮದ ತನಿಖೆಯು ಸಿಬಿಐ ನಿಂದ ನಡೆಯುತ್ತಿರುವುದರಿಂದ ಅನುದಾನ ದೊರೆಯದೇ ಕಾಮಗಾರಿ ಸ್ಥಗಿತಗೊಂಡಿವೆ ಎಂದು ಸದಸ್ಯರು ಸಭೆಗೆ ದೂರಿದರು.
ಈ ಬಗ್ಗೆ ಜಿಪಂ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಅನುದಾನ ದೊರೆಯುವ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುವಂತೆ ಸದಸ್ಯರು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಶೀಘ್ರ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಜಿಪಂ ಸಿಇಒ ಭರವಸೆ ನೀಡಿದರು. ಜಿಪಂ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ ಸಭೆಯಲ್ಲಿ ಮಾತನಾಡಿ, ಜಿಪಂ ಅಡಿ 3900ಕಿಮೀ ರಸ್ತೆಯಿದೆ. ಈ ರಸ್ತೆಯು ಈಚೆಗೆ ಸುರಿದ ಧಾರಾಕಾರ ಮಳೆಗೆ ಹಾಳಾಗಿದೆ. ಕೇಂದ್ರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿ ವಿವಿಧ ಯೋಜನೆಗಳಡಿ ರಸ್ತೆಗಳನ್ನು ನಿರ್ಮಿಸಿ ವಶಕ್ಕೆ ಪಡೆಯುವ ಜಿಪಂ ಅಧಿಕಾರಿಗಳು ಅವುಗಳನ್ನು ಆನಂತರದಲ್ಲಿ ನಿರ್ವಹಣೆಗೆ ಗಮನಹರಿಸುತ್ತಿಲ್ಲ. ಅದರಿಂದಾಗಿ ರಸ್ತೆಗಳು ಹಾಳಾಗುತ್ತಿವೆ ಎಂದು ಆರೋಪಿಸಿದರು.
ಅನುದಾನ: ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್ ಐಡಿಸಿಎಲ್ ಅಧಿಕಾರಿ ಜಿಪಂ ವ್ಯಾಪ್ತಿಯ ರಸ್ತೆಗಳ ಸಮಗ್ರ ದುರಸ್ತಿಗೆ ರು. 40 ಕೋಟಿ ಅವಶ್ಯಕತೆಯಿದ್ದು ಸರ್ಕಾರದಿಂದ ಇನ್ನೂ ರು. 28.24ಕೋಟಿ ಅನುದಾನ ಬರಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಕೃಷ್ಣಾ ಬಿ ಸ್ಕೀಂನಲ್ಲಿ ಲಭ್ಯವಾಗುವ ನೀರಿನ ಬಳಕೆಗೆ ನಂದವಾಡಗಿ ಏತನೀರಾವರಿ ಯೋಜನೆಯಡಿ ಜಿಲ್ಲೆಯ ಲಿಂಗಸ್ಗೂರು ಮತ್ತು ಮಾನವಿ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಈ ಬಗ್ಗೆ ಹಿಂದೆಯೇ ಜಿಪಂ ನಿಂದ ಸರ್ಕಾರಕ್ಕೆ ಪೂರಕ ಕ್ರಮ ಕೈಗೊಳ್ಳಲು ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಪಂ ನಿಂದ ಸರ್ವಾನುಮತದ ನಿರ್ಣಯ ಅಂಗೀಕರಿಸಿ, 1 ಟಿಎಂಸಿ ನೀರು ಬಳಕೆ ನಿಟ್ಟಿನಲ್ಲಿ ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೆ ಪೂರಕ ಕ್ರಮ ಕೈಗೊಳ್ಳಲು ಒತ್ತಡ ಹೇರಲು ಸರ್ಕಾರಕ್ಕೆ ಪುನಾ ಪ್ರಸ್ತಾವನೆ ಸಲ್ಲಿಸಲು ಆಗ್ರಹಿಸಿದರು.
ಇದಕ್ಕೆ ಸಭೆಯು ಸರ್ವಸಮ್ಮತಿ ನೀಡಿ ಈ ಬಗ್ಗೆ ಶೀಘ್ರದಲ್ಲಿಯೇ ಸಂಬಂಧಿಸಿದ ಪ್ರದೇಶದ ಜಿಪಂ ಸದಸ್ಯರಿಂದ ಎಲ್ಲ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ಜಿಪಂ ನಿಂದ ಪ್ರಸ್ತಾವನೆ ಸಲ್ಲಿಕೆಗೆ ಸಭೆಯಲ್ಲಿ ನಿರ್ಧರಿಸಲಾಯಿತು. ನಂತರ ವಿವಿಧ ಇಲಾಖೆಗಳ ಪ್ರಗತಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಮತ್ತಿತರರು ಇದ್ದರು.