ಕೋಳಬಾಳದಲ್ಲಿ ಮಕ್ಕಳ ಗ್ರಾಮ ಸಭೆ
ಸಿಂಧನೂರು: ತಾಲೂಕಿನ ಕೋಳಬಾಳ ಗ್ರಾಪಂ.ನಿಂದ ಪ್ರೌಢಶಾಲೆಯ ಆವರಣದಲ್ಲಿ 2013- 14ನೇ ಸಾಲಿನ ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ನಿರುಪಾದೆಪ್ಪ ವಹಿಸಿದ್ದರು. ನೋಡಲ್ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರವಾಗಿ ಸೂಪರ್‌ವೈಸರ್ ಮಹಾದೇವಮ್ಮ ನೇತೃತ್ವ ವಹಿಸಿದ್ದರು. ಮಕ್ಕಳ ಗ್ರಾಮಸಭೆ ಪಿಡಿಒ, ಮಕ್ಕಳ ಹಕ್ಕುಗಳ ಬಗ್ಗೆ ಶರಣೇಗೌಡ ಗುಂಜಳ್ಳಿ ಮಾತನಾಡಿದರು. ಸಭೆಯಲ್ಲಿ ಮುಖ್ಯಗುರು ಜಮೀರಪಾಷಾ, ಬಿಆರ್‌ಸಿ ಆದೆಪ್ಪ, ಪಂಚಾಯಿತಿ ವ್ಯಾಪ್ತಿಯ ಶಾಲಾ ಮುಖ್ಯಗುರುಗಳು, ಗ್ರಾಪಂ ಸರ್ವ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರಾದ ಶರಣಮ್ಮ, ಕುಮಾರ, ಲಿಂಗರಾಜ, ಶಾಲೆಯ ಎಲ್ಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ಭೀಮಣ್ಣ ಸ್ವಾಗತಿಸಿ, ಶೇಖರಗೌಡ ಹಂಪನಾಳ ನಿರೂಪಿಸಿದರು. ಹಿಂದಿ ಶಿಕ್ಷಕ ಹನುಮೇಶ ವಂದಿಸಿದರು.
ಮೃತರ ಹೆಸರಿನಲ್ಲಿ ಅನುದಾನ ಗುಳುಂ
ಸಿಂಧನೂರು: ಮೃತರ ಹೆಸರಿನ ಆಸ್ತಿ ನಂಬರ್ ಬಳಸಿ ಇಂದಿರಾ ಆವಾಸ್ ಯೋಜನೆಯ 35 ಸಾವಿರ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಳಗಾನೂರು ಗ್ರಾಮಸ್ಥರು ಆರೋಪಿಸಿದ್ದಾರೆ. ಬಳಗನೂರು ಗ್ರಾಪಂ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದ್ದು 2008- 09ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಲ್ಲಿ ಅಂದಿನ ಗ್ರಾಪಂ ಸದಸ್ಯೆ ದೇವಮ್ಮ, ಅಧ್ಯಕ್ಷ ಹಾಗೂ ಪಿಡಿಒ ಜೊತೆ ಲಾಬಿ ನಡೆಸಿ ತನ್ನ ಮಗಳನ್ನು ಇಂದಿರಾ ಆವಾಸ್ ಯೋಜನೆ ಫಲಾನುಭವಿಯಾಗಿ ಆಯ್ಕೆ ಮಾಡಿಸಿದ್ದರು. ಆಗ ತಾವು ಯಾವುದೇ ಆಸ್ತಿಯನ್ನು ಹೊಂದಿರದೇ ಇದ್ದರೂ ಮೃತ ಬಸನಗೌಡ ತಂದೆ ಕರಿಸಿದ್ದನಗೌಡ ಮನೆ ಸಂಖ್ಯೆ 6-186ನ್ನು ಪಾರ್ವತಿ ತಂದೆ ಮಹಾದೇವಪ್ಪ ಹೆಸರಿನಲ್ಲಿ ಅಡಮಾನ ಪತ್ರವನ್ನು ತಯಾರಿಸಿ 19.1.2009ರಂದು ನಿಗಮಕ್ಕೆ ಅಡಮಾನ ಮಾಡಿಸಿ ಮೋಸವೆಸಗಿದ್ದಾರೆ ಎಂದು ದೂರಿದ್ದಾರೆ. ಅಂದಿನ ಅಧ್ಯಕ್ಷೆ ಜಹೀರಾಬೇಗಂ, ಪಿಡಿಒ ಎಚ್.ರವೀಂದ್ರ ಮತ್ತು ನಕಲಿ ಫಲಾನುಭವಿ ಪಾರ್ವತಿ ಸೇರಿಕೊಂಡು ನಾಲ್ಕು ಚೆಕ್‌ಗಳ ಮೂಲಕ 35 ಸಾವಿರ ಪಡೆದು ಸರ್ಕಾರಕ್ಕೆ ಮೋಸವೆಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪಡೆದು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗುವುದು. ಭ್ರಷ್ಟಾಚಾರ ಕಾಯಿದೆ ನಿಯಂತ್ರಣದಡಿ ಬಂಧಿಸಬೇಕೆಂದು ಮನವಿ ಮಾಡಲಾಗುವುದು ಎಂದು ಗ್ರಾಮಸ್ಥರಾದ ಶೇಖರಗೌಡ ಮಾಲಿಪಾಟೀಲ್, ಅಮರೇಗೌಡ ಮಾಲಿಪಾಟೀಲ್, ಚನ್ನನಗೌಡ ಪೋ.ಪಾ., ಪಂಪಣ್ಣ ದ್ಯೂಟರ್, ಸಿದ್ದನಗೌಡ ಜಿನ್ನಿಂಗ್, ಪಂಪಣ್ಣ ದಡ್ಯಾಳ್, ಅಯ್ಯಪ್ಪ ಮಾಳಿಗಡ್ಡಿ ತಿಳಿಸಿದ್ದಾರೆ.