ನೈತಿಕ ಶಿಕ್ಷಣದಿಂದ ಸಜ್ಜನರು ಸೃಷ್ಟಿಯಾಗಲಿ
ಕನ್ನಡಪ್ರಭ ವಾರ್ತೆ, ರಾಯಚೂರು, ನ.27
ಶಿಕ್ಷಣವು ಸನ್ನಡತೆಯ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ಮಾಡಬೇಕಿದೆ. ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ನೈತಿಕ ಶಿಕ್ಷಣ ಇಂದು ಹೆಚ್ಚು ಅವಶ್ಯವಾಗಿದೆ ಎಂದು ಮಸ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಸ್. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಸ್ಪಂದನಾ ಸಭಾಂಗಣದಲ್ಲಿ ಬುಧವಾರ ಎಐಎಂಎಸ್‌ಎಸ್, ಎಐಡಿವೈಒ ಹಾಗೂ ಎಐಡಿಎಸ್‌ಒ ಜಿಲ್ಲಾ ಸಮಿತಿಗಳು ಜಂಟಿಯಾಗಿ ನಿರ್ಭಯ ಘಟನೆ ಮರುಕಳಿಸದಿರಲಿ ಎನ್ನುತ್ತಾ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಆಗ್ರಹಿಸಿ ಆಯೋಜಿಸಿದ್ದ ವಿದ್ಯಾರ್ಥಿ- ಯುವಜನ- ಮಹಿಳೆಯರ ರಾಯಚೂರು ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ನೈತಿಕ ಶಿಕ್ಷಣ ಸಿಗುತ್ತಿಲ್ಲ: ಸದ್ಯದ ಶಿಕ್ಷಣ ವ್ಯವಸ್ಥೆಯು ವೈದ್ಯರು ಎಂಜಿನಿಯರುಗಳನ್ನು ತಯಾರಿಸುತ್ತಿದೆ. ಉತ್ತಮ ನಡತೆ ಹೊಂದಿರುವ ಮನುಷ್ಯರನ್ನು ಸೃಷ್ಟಿಸುತ್ತಿಲ್ಲ. ಎಲ್ಲಿಯವರೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಮಾಜ ಸನ್ಮಾರ್ಗದಲ್ಲಿ ಸಾಗುವುದಿಲ್ಲ ಎಂದು ಹೇಳಿದರು.
ಪತ್ರಕರ್ತೆ ಹಾಗೂ ವಕೀಲರಾದ ವೀಣಾ ಪ್ರಮೋದ್ ಮಾತನಾಡಿ, ಹೆಣ್ಣು ಭೋಗದ ವಸ್ತುವೆಂಬ ದೃಷ್ಟಿಕೋನ ಸರಿಯಲ್ಲ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ನೀಡಲು ಹೋದಾಗ ದೂರು ಸ್ವೀಕರಿಸುವವರಿಂದಲೂ ರಕ್ಷಣೆ ದೊರೆಯದೇ ಪರದಾಡಿದ ಅನೇಕ ಪ್ರಸಂಗಗಳು ನಡೆದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಣಾಮಕಾರಿ ಆಂದೋಲನ ಬೇಕು: ವಕೀಲ ಶಿವರಾಜ್ ಪಾಟೀಲ್ ಹಿರೇಬಾದರದಿನ್ನಿ ಮಾತನಾಡಿ, ನವದೆಹಲಿಯ ನಿರ್ಭಯಾ ಪ್ರಕರಣವು ಮಾನವ ಸಮಾಜದ ವಿಕೃತಿಯ ಪರಾಕಾಷ್ಟೆಯಾಗಿದೆ. ಸಮಾಜದಲ್ಲಿ ಬೇರುಬಿಟ್ಟಿರುವ ಪುರುಷ ಪ್ರಧಾನ ಧೋರಣೆಯೇ ಕಾರಣವೆಂದ ಅವರು, ಪರಿಣಾಮಕಾರಿ ಸಾಂಸ್ಕೃತಿಕ ಆಂದೋಲನದಿಂದ ಮಾತ್ರ ಇಂಥ ಅಪರಾಧಗಳನ್ನು ತಡೆಯಬಹುದು ಎಂದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಬಿ.ರವಿ ಮಾತನಾಡಿ, ಸಾಮೂಹಿಕ ಅತ್ಯಾಚಾರದ ಘಟನೆಗಳು ಮತ್ತೆ ಮತ್ತೆ ಜರುಗುತ್ತಿರುವುದಕ್ಕೆ ನಮ್ಮ ದೇಶದ ಸಾಂಸ್ಕೃತಿಕ ಅಧಃಪತನವೇ ಕಾರಣ. ವಿದೇಶಿ ಮಾಧ್ಯಮಗಳ ಮೂಲಕ ಬಿತ್ತರಗೊಳ್ಳುವ ಅಶ್ಲೀಲತೆ, ಲೈಂಗಿಕತೆಯನ್ನು ಪ್ರೇರೇಪಿಸುವ ವಿಚಾರಗಳು ಸಮಾಜದ ಅಧಃಪತನಕ್ಕೆ ದಾರಿ ಮಾಡಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್. ಮಾತನಾಡಿದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸರೋಜಾ ಗೋನ್ವಾರ, ಎಐಡಿವೈಒ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ್ ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ ವಹಿಸಿದ್ದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧೆಡೆಯಿಂದ ಆಗಮಿಸಿದ್ದ ಸಂಘಟನೆಗಳ ಕಾರ್ಯಕರ್ತರು ಹಾಗೂ ನಗರದ ಜನತೆ ಪಾಲ್ಗೊಂಡಿದ್ದರು.
ಶ್ರದ್ಧಾಂಜಲಿ: ಈಚೆಗೆ ನಿಧನರಾದ ಎಐಎಂಎಸ್‌ಎಸ್‌ನ ರಾಜ್ಯಾಧ್ಯಕ್ಷೆ ಪ್ರತಿಭಾ ಕುಮಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.