ಪಪಂ ಸಿಬ್ಬಂದಿ ಗೈರು: ಅಧ್ಯಕ್ಷ ರಜ್ಜಬ್ ಕೆಂಡಾಮಂಡಲ
ಕನ್ನಡಪ್ರಭ ವಾರ್ತೆ, ಮುದಗಲ್, ನ.27
ಪಟ್ಟಣಕ್ಕೆ ಸರಬರಾಜಾಗುತ್ತಿರುವ ಶಾಶ್ವತ ಕುಡಿವ ನೀರಿನ ಶುದ್ಧೀಕರಣ ಘಟಕಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ರಾತ್ರೋರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ರಾತ್ರಿ ಜರುಗಿದೆ.
ಕನ್ನಾಪುರಹಟ್ಟಿ ಸಮೀಪದ ಜಲಶುದ್ಧೀಕರಣ ಘಟಕಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಸದಸ್ಯರು ಭೇಟಿ ನೀಡಿದಾಗ ಯಾವ ಸಿಬ್ಬಂದಿಯೂ ಶುದ್ಧೀಕರಣ ಘಟಕದಲ್ಲಿ ಇರಲಿಲ್ಲ. ಬದಲಿಗೆ ಹಾಜರಿ ಪುಸ್ತಕದಲ್ಲಿ ಮುಂಚಿತವಾಗಿ ಹಾಜರಿ ಹಾಕಿರುವುದು ಕಂಡುಬಂತು.
ಕಚೇರಿಯಲ್ಲಿ ಮದ್ಯದ ಬಾಟಲ್, ಇಸ್ಪೀಟ್ ಎಲೆ: ಅಲ್ಲದೆ ನೀರು ಶುದ್ಧೀಕರಣ ಘಟಕ ನಿಲುಗಡೆಯಾಗಿತ್ತು. ನೀರಿನ ತೊಟ್ಟಿಯಲ್ಲಿ ಹುಳು, ಪಾಚಿ ಹಾಗೂ ಸ್ವಚ್ಛತೆ ಇಲ್ಲದೆ ಕಸದ ರಾಶಿ ಇರುವ ನೀರು ಕಂಡುಬಂತು. ಕಚೇರಿಯಲ್ಲಿ ಮದ್ಯದ ಬಾಟಲಿಗಳು, ಇಸ್ಪೀಟ್ ಎಲೆಗಳು ಇರುವುದನ್ನು ಪಪಂ ಅಧ್ಯಕ್ಷ ರಜ್ಜಬ್ ಅಲಿ ಮತ್ತು ಸದಸ್ಯರು ಕಣ್ಣಾರೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಘಟಕದಲ್ಲಿ ರಕ್ಷಣೆ ಇಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಅಷ್ಟರಲ್ಲಿ ರಾತ್ರಿ ಪಾಳೆಯ ದಿನಗೂಲಿ ಕಾರ್ಮಿಕರು ಬಂದಾಗ ಅವ್ಯವಸ್ಥೆಯ ಕುರಿತು ವಿಚಾರಿಸದರು. ಆಗ ಅವರು ಹಾರಿಕೆ ಉತ್ತರ ನೀಡಿ ಕಕ್ಕಾಬಿಕ್ಕಿಯಾದರು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಸದಸ್ಯರಾದ ಎಸ್.ಈರಣ್ಣ ವಡ್ಡರ್, ಶಿವರಾಜ ತಳವಾರ, ಮಹ್ಮದ್ ಸಾದಿಕ ಅಲಿ, ಅಬ್ದುಲ್ಲ ರೌಫ್, ಬಂದೇನವಾಜ್, ಖಾಜಪಾಶ ಗಾಡಿವಾನ್, ಸೇರಿದಂತೆ ಮುಂತಾದವರು ಇದ್ದರು.
ನೋಟಿಸ್: ನೀರು ಶುದ್ಧೀಕರಣ ಘಟಕದಲ್ಲಿ ಕಾವಲು ಸಿಬ್ಬಂದಿ ಇಲ್ಲದೆ ಇರುವುದು, ಸಿಬ್ಬಂದಿ ಮೇಲೆ ನಿಗಾವಹಿಸದೆ ನಿರ್ಲಕ್ಷ್ಯ ತಾಳಿದ್ದರಿಂದ ರೊಚ್ಚಿಗೆದ್ದ ಅಧ್ಯಕ್ಷ ರಜ್ಜಬಲಿ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.