ಶಾಸಕ ಸಂಭಾಜಿ ಪಾಟೀಲ್ ಗಡಿಪಾರಿಗೆ ಆಗ್ರಹ
ಸಿಂಧನೂರು: ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ನ ಶಾಸಕ ಸಂಭಾಜಿ ಪಾಟೀಲರ ಅಸಂವಿಧಾನಿಕ ಭಾಷೆ ಖಂಡಿಸಿರುವ ತಾಲೂಕಿನ ಕನ್ನಡಪರ ಸಂಘಟನೆಗಳು, ಶಾಸಕ, ಅವರ ಹಿಂಬಾಲಕರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದವು.
ಕನ್ನಡ ಭಾಷೆ, ನಾಡು, ಜನತೆ, ಕನ್ನಡದ ನೀರು ಹಾಗೂ ಸರ್ಕಾರದ ಬಗ್ಗೆ ತನ್ನ ಯೋಗ್ಯತೆಗೂ ಮೀರಿ ಮಾತನಾಡಿದ ಶಾಸಕ ಸಂಭಾಜಿ, ಕರ್ನಾಟಕದಲ್ಲಿದ್ದೂ ಮಹಾರಾಷ್ಟ್ರದವರಂತೆ ವರ್ತಿಸುತ್ತಿರುವುದು ಸರಿಯಲ್ಲ. 4 ಜನ ಶಾಸಕರಿದ್ದರೆ ಕರ್ನಾಟಕವನ್ನು ಚಟ್ಟದ ಮೇಲೆ ಹಾಕಿ ಶವಯಾತ್ರೆ ಮಾಡುತ್ತೇನೆಂಬ ಉದ್ಧಟನತದ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕನ್ನಡ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ ಉಪ್ಪಾರ ಟೀಕಿಸಿದರು.
ಕರವೇ ತಾಲೂಕಾಧ್ಯಕ್ಷ ಅಜಿತ್ ಓಸ್ತವಾಲ್ ಮಾತನಾಡಿ, ಕನ್ನಡದ ಅಧಿವೇಶನಕ್ಕೆ ಪ್ರತಿಯಾಗಿ ಸೀಮಾ ಮಾಹಾಮೇಳಾವ ನಡೆಸುತ್ತಿರುವ ಶಾಸಕನಿಗೆ ಕನ್ನಡದ ಬಗ್ಗೆ ಮಾತನಾಡುವ ಹಕ್ಕಿಲ್ಲ. ರಾಜ್ಯ ಸರ್ಕಾರದ ಶವಯಾತ್ರೆಗೆ ಮುನ್ನ ಮಹಾರಾಷ್ಟ್ರದಲ್ಲಿ ಆತನ ಶವಯಾತ್ರೆ ನಡೆಸುವ ಧೈರ್ಯ ಕನ್ನಡಿಗರಿಗೆ ಇದೆ. ಇದನ್ನು ಮರೆತು ಲಂಗುಲಗಾಮಿಲ್ಲದೇ ಮಾತನಾಡುತ್ತಿರುವ ಶಾಸಕರ ನಾಲಿಗೆ ಕತ್ತರಿಸಬೇಕೆಂದು ಒತ್ತಾಯಿಸಿದರು.
ನಂತರ ಕರವೇ ತಾಲೂಕಾಧ್ಯಕ್ಷ ಗಂಗಣ್ಣ ಡಿಶ್, ನಗರ ಘಟಕಾಧ್ಯಕ್ಷ ದೌವಲಸಾಬ್ ದೊಡ್ಮನಿ, ತಾಲೂಕು ಉಪಾಧ್ಯಕ್ಷ ದೇವೆಂದ್ರಗೌಡ, ಕಾಳಪ್ಪ ಕಂಬಾರ, ಮೌನೇಶ ಭಜಂತ್ರಿ, ರಾಮಕೃಷ್ಣ ಭಜಂತ್ರಿ, ಖಾಜಿಮಲಿಕ್ ವಕೀಲರು, ಮಲ್ಲಿಕಾರ್ಜುನ, ಅನಿಲ ಕುಮಾರ, ಕೆ.ಕರಿಲಿಂಗಪ್ಪ, ವೀರೇಶ ಯರದಿಹಾಳ, ಖಾಜಾ ಬಡಿಬೇಸ್, ಇಂಧುಮತಿ, ಫಾರೂಖ್ ಅಹ್ಮದ್, ಮೌನೇಶ ದೊರೆ, ರಬ್ಬಾನಿ ಜಾಹಗೀರದಾರ, ಸುರೇಶ ಇತರರು ಇದ್ದರು.