ಬಿಜೆಪಿಯಿಂದ ಸಿಎಂ ಪ್ರತಿಕೃತಿ ದಹನ
ರಾಯಚೂರು: ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರ ವಿಠ್ಠಲ್ ಅರಭಾವಿ ಆತ್ಮಹತ್ಯೆ ಘಟನೆಯಿಂದ ರಾಜ್ಯ ಸರ್ಕಾರ ರೈತ ವಿರೋಧಿ ಎಂಬುದು ಸಾಬೀತಾಗಿದೆ. ರೈತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಸಿಎಂ ಪ್ರತಿಕೃತಿ ದಹಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ರೈತರಿಗೆ ಸೂಕ್ತ ರಕ್ಷಣೆ ನೀಡಲು ವಿಫಲವಾದ ಸರ್ಕಾರ ವಜಾಕ್ಕೆ ಒತ್ತಾಯಿಸಿದರು.
ನಿರ್ಲಕ್ಷ್ಯ ಧೋರಣೆ: ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ರೈತರು ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ರೈತರು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ರೈತರ ಪರ ಎಂದು ಹೇಳಿಕೊಳ್ಳುತ್ತಲೇ ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಾತಿ ಓಲೈಕೆ ರಾಜಕೀಯದಲ್ಲಿ ಮುಳುಗಿ ರೈತರ ಸಮಸ್ಯೆಗಳನ್ನು ಮರೆತಿದೆ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸದ ಸರ್ಕಾರ ಸಕ್ಕರೆ ಕಾರ್ಖಾನೆಗಳ ಪರ ನಿಲುವು ತಾಳಿದ್ದರಿಂದಲೇ ಬೆಳಗಾವಿಯ ಸುವರ್ಣಸೌಧದ ಎದುರು ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರನೇ ಈ ಘಟನೆಗೆ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.
ಸಿಎಂ ರಾಜಿನಾಮೆಗೆ ಆಗ್ರಹ: ರೈತನ ಆತ್ಮಹತ್ಯೆಗೆ ಕಾರಣವಾಗಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ತಪ್ಪಿದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವುದು ಹೆಚ್ಚು ಸೂಕ್ತ ಎಂದು ಹೇಳಿದರು.
ಒಂದೆಡೆ ಕೇಂದ್ರ ಸರ್ಕಾರ ಅಗತ್ಯವಸ್ತುಗಳ ಬೆಲೆಯೇರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅದರಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಸಮರ್ಪಕ ಹಾಗೂ ವೈಜ್ಞಾನಿಕ ಬೆಲೆ ನೀಡುವಲ್ಲಿ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.
ಕಾಳಜಿಯಿಲ್ಲ: ಕಳೆದ ಆರು ತಿಂಗಳಿಂದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ಕಾರ್ಯವೈಖರಿಯು ಜನತೆಗೆ ಅನುಮಾನ ಬರುವಂತೆ ಮಾಡಿದೆ. ಕೇವಲ ಜಾತಿ ರಾಜಕೀಯ ಮಾಡುತ್ತಲೇ ಕಾಲಹರಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ, ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಹಿರಿಯ ಮುಖಂಡರಾದ ತಿಮ್ಮಯ್ಯ, ತ್ರಿವಿಕ್ರಮ್ ಜೋಷಿ, ಬಂಡೇಶ ವಲ್ಕಂದಿನ್ನಿ, ರಮಾನಂದ ಯಾದವ್, ರಾಜಕುಮಾರ, ರಮೇಶ ಗುರುಮಿಟ್ಕಲ್, ಕಡಗೋಳ ರಾಮಚಂದ್ರ, ಜೇಮ್ಸ್, ನರಸಪ್ಪ ಯಕ್ಲಾಸಪೂರ, ಬಿ.ಎಸ್. ಸುರಗಿಮಠ, ಡಬ್ಲ್ಯು.ರಾಮಪ್ಪ ಸೇರಿದಂತೆ ಅನೇಕರಿದ್ದರು.
ರೈತನ ಆತ್ಮಹತ್ಯೆಗೆ ಕಾಂಗ್ರೆಸ್
ಧೋರಣೆ ಕಾರಣ: ಆಕ್ರೋಶ
ರಾಯಚೂರು: ಕಬ್ಬಿಗೆ ಬೆಳೆಗೆ ನ್ಯಾಯಯುತ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರ ವಿಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿ ರುವುದಕ್ಕೆ ಕಾಂಗ್ರೆಸ್ ಸರ್ಕಾರದ ಫ್ಯಾಸಿಸ್ಟ್ ನೀತಿಗಳೇ ಕಾರಣ ಎಂದು ಸಿಪಿಎಂಎಲ್ ರೆಡ್ ಫ್ಲ್ಯಾಗ್ ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ. ಬಸವಲಿಂಗಪ್ಪ, ರಾಜ್ಯದೆಲ್ಲೆಡೆ ರೈತರು ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಿ, ಕಳೆದ ಅನೇಕ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಅತ್ತ ಗಮನಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದ ಎದುರು ಅಧಿವೇಶನದ ಸಂದರ್ಭ ಹೋರಾಟ ನಡೆಸುವ ಮೂಲಕ ಗಮನ ಸೆಳೆಯುವ ಕಾರ್ಯ ಮಾಡಿದ ರೈತರನ್ನು ಸರ್ಕಾರ ಕಡೆಗಣಿಸಿರುವುದು ಫ್ಯಾಸಿಸ್ಟ್ ನೀತಿಯನ್ನು ಸ್ಪಷ್ಟಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಹಾವೇರಿಯಲ್ಲಿ ರೈತರು ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಹೋರಾಟಕ್ಕಿಳಿದಾಗ ಅವರ ಮೇಲೆ ಆಗಿನ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿತ್ತು. ಇಂದು ಕೆಜೆಪಿ, ಬಿಜೆಪಿಗಳು ಸಹ ಮತ ಗಳಿಕೆಯ ಹುನ್ನಾರದಿಂದಲೇ ವಿವಿಧ ಕಾರಣಕ್ಕೆ ರೈತರ ಪರ ಮೊಸಳೆ ಕಣ್ಣೀರು ಸುರಿಸುವ ನಾಟಕವಾಡುತ್ತಿವೆ ಎಂದು ಟೀಕಿಸಿದ್ದಾರೆ.
ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳಿಂದಾಗಿಯೇ ದೇಶದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆತ್ಮಹತ್ಯೆ ಪ್ರಕರಣಗಳು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಲ್ಲ. ರೈತರು ಇದನ್ನು ಮನಗಂಡು ಸರ್ಕಾರಗಳು ಜಾರಿಗೆ ತರುತ್ತಿರುವ ಜಾಗತೀಕರಣ ಪರ ನೀತಿಗಳ ವಿರುದ್ಧ ಹೋರಾಡುವುದು ಅವಶ್ಯಕ ಎಂದು ತಿಳಿಸಿದ್ದಾರೆ.