ಭೂರಹಿತರಿಗೆ ಜಮೀನು; ಬಿಎಸ್ಪಿ ಧರಣಿ
ಕನ್ನಡಪ್ರಭ ವಾರ್ತೆ ರಾಯಚೂರು ನ.28
ಭೂರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನು ಹಂಚಿಕೆ, ಬಗರ್ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಬಿಎಸ್ಪಿ ಪಕ್ಷದಿಂದ ಧರಣಿ ನಡೆಸಲಾಯಿತು.
ಈ ಕುರಿತು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಅನೇಕ ಕಡೆ ಎಸ್ಸಿ, ಎಸ್ಟಿ ಜನಾಂಗದವರು ಹಾಗೂ ಬಡವರು ಸರ್ಕಾರಿ ಜಮೀನಿನಲ್ಲಿ ಕಳೆದ ಅನೇಕ ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ಅಂಥವರನ್ನು ಜಮೀನನ್ನು ಸಕ್ರಮಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅನೇಕರು ಅಕ್ರಮ ಸಕ್ರಮ ಯೋಜನೆ ಅಡಿ ಸರ್ಕಾರಿ ಜಮೀನಿನ ಹಕ್ಕುಪತ್ರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದು, ಅಂಥವರಿಗೆ ಸರ್ಕಾರ ಇದುವರೆಗೆ ಹಕ್ಕುಪತ್ರ ನೀಡದೇ ವಿಳಂಬ ತೋರಿದೆ. ಆದರೆ ರಿಯಲ್ ಎಸ್ಟೇಟ್ ದಂಧೆಯ ವರಿಗೆ ಹಾಗೂ ಭೂಮಾಫಿಯಾದವರಿಗೆ ಸರ್ಕಾರ ಜಮೀನು ಮಂಜೂರಾತಿ ನೀಡುತ್ತಿದೆ ಎಂದು ಟೀಕಿಸಿದರು.
ಸರ್ಕಾರವು ನಿಗದಿಪಡಿಸಿದ ಜಮೀನಿನ ಪ್ರಮಾಣಕ್ಕಿಂತ ಹೆಚ್ಚಿನ ಜಮೀನು ಹೊಂದಿರುವವರಿಂದ ಜಮೀನು ಮರಳಿ ಪಡೆದು ಅಂಥ ಜಮೀನನ್ನು ಬಡಭೂರಹಿತರಿಗೆ ವಿತರಿಸಬೇಕು. ಅಕ್ರಮ ಸಕ್ರಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಭೂ ನ್ಯಾಯ ಮಂಡಳಿಯನ್ನು ರಚಿಸಬೇಕೆಂದು ಆಗ್ರಹಿಸಿದರು.
ಸ್ಮಶಾನ ಜಾಗ: ರಾಜ್ಯದ ಶೇ.80ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿಯಿಲ್ಲ. ಹೀಗಾಗಿ ಜನತೆ ತೊಂದರೆ ಎದುರಿಸುತ್ತಿದ್ದು, ಕೂಡಲೇ ಎಲ್ಲ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದಲ್ಲಿ ಕಾಲಮಿತಿಯಲ್ಲಿ ಸ್ಮಶಾನಕ್ಕೆ ಜಮೀನು ಒದಗಿಸುವ ಕಾರ್ಯ ಸರ್ಕಾರ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿ ವಿ.ಬಾಲಸುಬ್ರಹ್ಮಣ್ಯಂ ಅವರು ನೀಡಿದ ವರದಿಯನ್ನು ಸರ್ಕಾರ ಒಪ್ಪಿಕೊಂಡು ಅದರ ಶಿಫಾರಸು ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು.ಭೂರಹಿತರಿಗೆ ಸರ್ಕಾರಿ ಜಮೀನು ಹಂಚಿಕೆ ಮಾಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಪಾದ ನರಸಪ್ಪ, ಹನುಮಂತಪ್ಪ ವಕೀಲರು ಸೇರಿ ಅನೇಕರಿದ್ದರು.