ಅಕ್ರಮ ಮರಳು ದಂಧೆ; ಕ್ರಮಕ್ಕೆ ಒತ್ತಾಯ
ರಾಯಚೂರು: ಮಾನವಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಜಿಲ್ಲಾ ಸಮಿತಿಯು ಮಾನವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಗುತ್ತಿಗೆದಾರ ಈರಪ್ಪಗೌಡ ಎಂಬುವವರನ್ನು ಕಪ್ಪುಪಟ್ಟಿಗೆ ಸೇರಿಸಿ ಲೋಕೋಪಯೋಗಿ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದು ಅವರೇ ಅಕ್ರಮ ಮರಳು ಸಾಗಣೆಯಲ್ಲಿ ತೊಡಗಿದ್ದಾರೆಂದು ದೂರಿದೆ.
ಆಡಳಿತದ ಅಸಹಾಯಕತೆ: ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಣೆ ಮಾಡುತ್ತಿರುವ ಈ ವ್ಯಕ್ತಿಯ ಬಗ್ಗೆ ಸಂಘಟನೆಯು ಅನೇಕ ಬಾರಿ ತಾಲೂಕಾಡಳಿತಕ್ಕೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಸಿಲುಕಿದ್ದು ಗುತ್ತಿಗೆದಾರನ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆಂದು ತಿಳಿಸಿದರು.
ಅದೇ ರೀತಿ ಮಾನವಿ ತಾಲೂಕಿನ ಯಡಿವಾಳದಲ್ಲಿಯೂ ವೀರಭದ್ರಪ್ಪ ಎಂಬುವವರು ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದು ಕಳೆದ ಅನೇಕ ವರ್ಷಗಳಿಂದ ಇಂಥ ಅಕ್ರಮದಲ್ಲಿದ್ದರೂ ತಾಲೂಕು ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಎಚ್ಚರಿಕೆ: ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಸಂಘಟನೆಯು ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ಶಿವುಕುಮಾರ್ ಯಾದವ್, ಕಾರ್ಯಾಧ್ಯಕ್ಷ ಧರ್ಮರಾಜು ಶಕ್ತಿನಗರ, ಮಾನವಿ ತಾಲೂಕಾಧ್ಯಕ್ಷ ಗುರುರಾಜ ನಾಗಲಾಪೂರು, ಉಪಾಧ್ಯಕ್ಷ ಗುರುಸ್ವಾಮಿ ಕಂಬಳತ್ತಿ ಮತ್ತಿತರರಿದ್ದರು.