ಅಧಿಕಾರಿಗಳಿಂದ 'ಮಿಂಚಿನ ಸಂಚಾರ'
ರಾಯಚೂರು: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಒಳಗೊಂಡಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಉಪಸಮನ್ವಯಾಧಿಕಾರಿಗಳು ಸೇರಿದಂತೆ ಜಿಲ್ಲೆಯಲ್ಲಿ 7 ತಂಡಗಳನ್ನು ರಚಿಸಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಮಿಂಚಿನ ಸಂಚಾರದ ಮೂಲಕ ಭೇಟಿ ನೀಡಲಾಯಿತು.
ಮಿಂಚಿನ ಸಂಚಾರವನ್ನು ನ.28ರಂದು ಕೈಗೊಂಡು ಸಿಂಧನೂರು ತಾಲೂಕಿನ 72 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ, ಮಕ್ಕಳ ಹಾಜರಾತಿ, ಕಲಿಕಾ ಗುಣಮಟ್ಟ, ಶಾಲೆಗಳ ಮೂಲಭೂತ ಸೌಕರ್ಯಗಳ ಕುರಿತು ತಪಾಸಣೆ, ಮತ್ತು ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಅನುಷ್ಟಾನ ಕುರಿತು ಪರಿಶೀಲಿಸಲಾಯಿತು.
ಶಾಲೆಗೆ ಗೈರು ಹಾಜರಾದ 30 ಜನ ಶಿಕ್ಷಕರಿಗೆ ಸ್ಥಳದಲ್ಲಿಯೇ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಯಿತು. ಅವರಿಂದ ಲಿಖಿತ ಹೇಳಿಕೆ ಪಡೆಯುವ ಜತೆಗೆ ಅವರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಂಡ ಸೂಚನೆ ನೀಡಿತು ಎಂದು ಉಪನಿರ್ದೇಶಕರು (ಆಡಳಿತ) ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.