ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಡಿ.3ರಂದು ನೇತ್ರ ತಪಾಸಣೆ ಶಿಬಿರ

Vishwanath S
Updated On : 1 Dec 2013, 12:47 pm

ರಾಯಚೂರು:  ನಗರದಲ್ಲಿ ಡಿ.3ರಂದು ಲಯನ್ಸ್ ಕ್ಲಬ್ ಮತ್ತಿತರೆ ಸಂಘ ಸಂಸ್ಥೆಗಳ ವತಿಯಿಂದ ಕಣ್ಣಿನ ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಪ್ರಮುಖ ಕಮಲ್ ಕುಮಾರ್ ಜೈನ್ ಹೇಳಿದರು.
ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿದ್ದು, ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೇವಾಶ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಸುರಕ್ಷಾ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ವಿಶ್ವದಾದ್ಯಂತ 13.70 ಕೋಟಿ ಲಯನ್ಸ್ ಕ್ಲಬ್‌ನ ಸದಸ್ಯರಿದ್ದು, ಭಾರತವು ವಿಶ್ವದಲ್ಲಿಯೇ ಸದಸ್ಯರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಿದೆ ಎಂದು ತಿಳಿಸಿದರು.
ಕಳೆದ ವರ್ಷ ಮಾನವಿ ತಾಲೂಕಿನ ಸಿರವಾರದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದಲ್ಲಿ 300ಕ್ಕೂ ಹೆಚ್ಚಿನ ರೋಗಿಗಳು ಪಾಲ್ಗೊಂಡಿದ್ದರು. ಬೆಂಗಳೂರಿನಿಂದ ಸುಮಾರು 24ಜನರಿರುವ ವೈದ್ಯರು, ನರ್ಸ್‌ಗಳು ಮತ್ತು ತಜ್ಞರ ತಂಡ ಆಗಮಿಸಲಿದೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸೆ: ಡಿ. 3ರಂದು ಬೆಳಗ್ಗೆ 10.30ಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ರೋಗಿಗಳ ಪ್ರಾಥಮಿಕ ತಪಾಸಣೆ ನಡೆಯಲಿದ್ದು, ನಂತರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯಬಿದ್ದಲ್ಲಿ ಅಂಥವರನ್ನು ಸುರಕ್ಷಾ ಆಸ್ಪತ್ರೆಯಲ್ಲಿ ದಾಖಲಿಸಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಸಕ್ತ ಶಿಬಿರದಲ್ಲಿ 250 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಸೌಲಭ್ಯವಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಶಿಬಿರಕ್ಕೆ ದಾಖಲಾದಲ್ಲಿ ಅಂಥವರಿಗೆ ಮುಂದಿನ ದಿನಗಳಲ್ಲಿ ಅಂಥ ಸೌಲಭ್ಯ ದೊರಕಿಸುವ ಕಾರ್ಯ ಕ್ಲಬ್ ಮಾಡಲಿದೆ ಎಂದು ತಿಳಿಸಿ, ಶಿಬಿರದ ಆಯೋಜನೆ ವೇಳೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯಕರ್ತರು ನೆರವಾಗಲಿದ್ದಾರೆಂದು ತಿಳಿಸಿದರು.
ವ್ಯವಸ್ಥೆ: ಸಾಮಾನ್ಯವಾಗಿ ವಿವಿಧ ಆಸ್ಪತ್ರೆಗಳಲ್ಲಿ ಇಂಥ ಶಸ್ತ್ರಚಿಕಿತ್ಸೆಗಳಿಗೆ 5 ರಿಂದ 10ಸಾವಿರ ರು. ವೆಚ್ಚವಾಗುತ್ತದೆ. ಆದರೆ ಶಿಬಿರದಲ್ಲಿ ಸಂಪೂರ್ಣವಾಗಿ ಉಚಿತವಾಗಿ ನಿರ್ವಹಿಸಲಾಗುತ್ತದೆ. ರೋಗಿಗಳಿಗೆ ಹಾಗೂ ಅವರ ಒಬ್ಬ ಸಂಬಂಧಿಗೆ ಊಟದ ವ್ಯವಸ್ಥೆ ಉಚಿತವಾಗಿ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ವಿವಿಧೆಡೆಯಿಂದ ರೋಗಿಗಳು ಆಗಮಿಸಿ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನಪಡೆಯುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಶಿವಪ್ರತಾಪ್, ಗೌತಮ್, ಕೃಷ್ಣಾ, ಶಿವಕುಮಾರ್, ಗೋವಿಂದರಾಜು, ಜಗದೀಶ್ ಗುಪ್ತಾ, ವೆಂಕೋಬರಾವ್ ಗಢಾಲೆ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement