ಮಕ್ಕಳ ಬೌದ್ಧಿಕ ಪ್ರಗತಿಗೆ ಚೆಸ್ ಪೂರಕ
ರಾಯಚೂರು: ಬುದ್ಧಿವಂತರ ಕ್ರೀಡೆ ಎಂದೇ ಹೆಸರಾಗಿರುವ ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಳ ಕಾಣಲಿದೆ. ಅದರಿಂದಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಬಿಇಒ ಮಲ್ಲಿಕಾರ್ಜುನ ಕರೆ ನೀಡಿದರು.
ಅವರು ಶನಿವಾರ ನಗರದಲ್ಲಿ ವಿಶ್ವ ಚೆಸ್ ದಿನಾಚರಣೆ ನಿಮಿತ್ತ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಚೆಸ್ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಬೌದ್ಧಿಕ ಸಾಮಾರ್ಥ್ಯ ಹೆಚ್ಚಿಸುವಲ್ಲಿ ಚೆಸ್ ಆಡುವುದು ನೆರವಾಗಲಿದೆ. ವಿದ್ಯಾರ್ಥಿ ಹಂತದಲ್ಲಿರುವಾಗಲೇ ಬೌದ್ಧಿಕ ಬೆಳವಣಿಗೆಗೆ ಹೆಚ್ಚಿಸುವ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮಕ್ಕಳಿಗೆ ಪಾಲಕರು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ವಿಶ್ವ ಚೆಸ್ ದಿನ: ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ವೈ. ಸುಭಾಷ್ ಚೌಧರಿ, ಜಿಲ್ಲೆಯು ಚೆಸ್ ಕ್ರೀಡೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಚೆಸ್ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೆಯೇ ಶಾಲಾ ಮಕ್ಕಳಲ್ಲಿ ಚೆಸ್ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಲ್ಲಿ ಅಡಗಿರುವ ಚೆಸ್ಗೆ ಸಂಬಂಧಿಸಿದ ಪ್ರತಿಭೆಯನ್ನು ಹೊರತರುವ ಪ್ರಯತ್ನ ಸಂಸ್ಥೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ನಿರಂತರ ಸ್ಪರ್ಧೆ ಆಯೋಜಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಜಿಲ್ಲೆಯಿಂದ ಉತ್ತಮ ಚೆಸ್ಪಟುಗಳನ್ನು ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಸ್ಪರ್ಧೆಗಳು: ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಒಟ್ಟು 95ಮಕ್ಕಳು ಪಾಲ್ಗೊಂಡಿದ್ದರು. 5 ರಿಂದ 7ನೇ ತರಗತಿ ವರೆಗೆ ಕಿರಿಯ ಮತ್ತು 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿರಿಯರ ವಿಭಾಗ ಹಾಗೂ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ನಾಲ್ಕು ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.
ಉದ್ಘಾಟನೆ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ವಿ. ಸತೀಶ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಶ್ರೀಧರ್, ಸೇರಿ ಶಾಲಾ ಮಕ್ಕಳು ಮತ್ತು ಬೋಧಕ ವರ್ಗ ಪಾಲ್ಗೊಂಡಿದ್ದರು.