ಮತದಾರರ ಪಟ್ಟಿ ಪರಿಷ್ಕರಣೆ: ಅರ್ಜಿ ತಿರಸ್ಕಾರಕ್ಕೆ ಆಕ್ಷೇಪ
ಕನ್ನಡಪ್ರಭ ವಾರ್ತೆ , ರಾಯಚೂರು , ನ.30
ಮತದಾರರ ಹೆಸರು ಸೇರ್ಪಡೆ ಮತ್ತು ಗುರುತಿನ ಚೀಟಿಗೆ ಕೋರಿ ಸಲ್ಲಿಕೆಯಾಗಿದ್ದ 7ಸಾವಿರ ಆನ್‌ಲೈನ್ ಅರ್ಜಿಗಳನ್ನು ತಾಲೂಕು ಆಡಳಿತ ವಿನಾ ಕಾರಣ ತಿರಸ್ಕರಿಸಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಟಿಪ್ಪು ಸುಲ್ತಾನ್ ಸಂಘ ಒತ್ತಾಯಿಸಿದೆ.
ಈ ಕುರಿತು ಶನಿವಾರ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ಕಾರ್ಯಕರ್ತರು, 2013ನೇ ಸಾಲಿನ ಜೂನ್ ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೇಳೆ ಹೆಸರು ಸೇರ್ಪಡೆಗೆ 7ಸಾವಿರ ಅರ್ಜಿಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಲಾಗಿತ್ತು. ಆದರೆ ಅರ್ಜಿಗಳನ್ನು ಸಹಾಯಕ ಆಯುಕ್ತರ ಆದೇಶದಂತೆ ತಿರಸ್ಕರಿಸಲಾಗಿದೆ ಎಂದು ಆಕಾಂಕ್ಷಿಗಳಿಗೆ ತಿಳಿ ಸಲಾಗಿದೆ ಎಂದು ದೂರಿದರು. ಗಣಕಯಂತ್ರ ಆಪರೇಟರ್‌ಗಳು ಪ್ರತಿ ಹೆಸರು ಸೇರ್ಪಡೆಗೆ ರು. 400 ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ವಿಭಾಗದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ನೇಮಿಸ ಬೇಕು. ಸದ್ಯ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ನಿಟ್ಟಿನಲ್ಲಿ ಜನತೆಗೆ ನೆರವಾಗುವ ಸಿಬ್ಬಂದಿಯನ್ನು ನೇಮಿಸದಿದ್ದಲ್ಲಿ ಸಂಘಟನೆಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಿದೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಮಹ್ಮದ್ ಅಬ್ದುಲ್ ಹೈ ಫೈರೋಜ್. ಅಮೀರ್ ಬೇಗ್, ಜುಹೂರ್ ಅಹ್ಮದ್ ಸೇರಿ ಅನೇಕರಿದ್ದರು.