ಇಂದು ನಾಲವಾರ ಕೋರಿ ಸಿದ್ದೇಶ್ವರರ ಪುಣ್ಯಾರಾಧನೆ
ಗುಲ್ಬರ್ಗ/ಶಹಾಬಾದ್: ಸುಕ್ಷೇತ್ರ ನಾಲವಾರದ ಶ್ರೀಕೋರಿಸಿದ್ದೇಶ್ವರ ಸಂಸ್ಥಾನ ಮಠ ಹಾಗೂ ವಿವಿಧೆಡೆಯ ಶಾಖಾ ಮಠಗಳಲ್ಲಿ ಅ.26 ಶನಿವಾರ ಸಪ್ತಮಿ ದಿನದಂದು ಸದ್ಗುರು ಕೋರಿಸಿದ್ದೇಶ್ವರ ಶಿವಯೋಗಿ ಪುಣ್ಯಾರಾಧನೆ ಮಹೋತ್ಸವ ನಡೆಯಲಿದೆ ಎಂದು ಮಠ ತಿಳಿಸಿದೆ. ಶ್ರೀಮಠದ ಪೀಠಾಧಿಪತಿಗಳಾದ ಡಾ. ಸಿದ್ದತೋಟೆಂದ್ರ ಶಿವಾಚಾರ್ಯ ಶ್ರೀ ಸಾನ್ನಿಧ್ಯದಲ್ಲಿ ನಡೆಯಲಿರುವ ಪುಣ್ಯಾರಾಧನೆ ನಿಮಿತ್ತ ಕತೃ ಗದ್ದುಗೆಗೆ ವಿಶೇಷ ಅಭಿಷೇಕ, ಪೂಜೆ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುವವು.
ಸುಕ್ಷೇತ್ರ ನಾಲವಾರ ಸೇರಿದಂತೆ ಜೇವರ್ಗಿ ತಾಲೂಕಿನ ಮಂದೇವಾಲ, ಬಿರಾಳ (ಕೆ), ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಮ್ಮಾಪುರ ಶಾಖಾ ಮಠಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಕರಡಕಲ್ ಶಾಖಾ ಮಠದಲ್ಲಿ ಶಾಂತರುದ್ದರಮುನಿಗಳು, ಮುದನೂರನಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು ನೇತೃತ್ವ ವಹಿಸುವರು. ಕೆಂಭಾವಿಯಲ್ಲಿ ಪುಣ್ಯಾರಾಧನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಮಹೋತ್ಸವಕ್ಕೆ ಜಿಲ್ಲೆಯ, ಹೊರ ಜಿಲ್ಲೆಯ, ಅನೇಕ ಭಾಗಗಳಿಂದ ವಿವಿಧ ಶಾಖಾ ಮಠದಲ್ಲಿ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.