ಸಮರ್ಪಕ ಕಬ್ಬಿನ ದರ ನಿಗದಿಗೆ ಒತ್ತಾಯ: ಪಾಟೀಲ್
ಗುಲ್ಬರ್ಗ: ಬರುವ ನವೆಂಬರ್ 1 ರಿಂದ ಕಬ್ಬು ಕಟಾವು ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಕೂಡಲೇ ಜಿಲ್ಲಾಧಿಕಾರಿ ಗುಲ್ಬರ್ಗ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಸಮರ್ಪಕ ಕಬ್ಬಿನ ದರ ನಿಗದಿಪಡಿಸಬೇಕೆಂದು ಕಲ್ಯಾಣ ಕರ್ನಾಟಕ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಗದೀಶ ಪಾಟೀಲ್ ರಾಜಾಪುರ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2012-13ನೇ ಸಾಲಿನ ಕಬ್ಬಿನ ಬೆಲೆ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಪ್ರತಿ ಟನ್ನಿಗೆ 2500 ನೀಡಿದರೆ, ಗುಲ್ಬರ್ಗ ಜಿಲ್ಲೆಯಲ್ಲಿ ಮಾತ್ರ 2300 ನೀಡಲಾಗಿದೆ ಎಂದು ಆರೋಪಿಸಿದರು.
2013-14ನೇ ಸಾಲಿನ ಕಬ್ಬು ಕಟಾವು ಪ್ರಾರಂಭದ ಹಂತದಲ್ಲಿದ್ದು, ಬೆಲೆ ಇನ್ನೂ ನಿಗದಿಯಾಗಿಲ್ಲ. ಈ ವರ್ಷ ಪ್ರತಿ ಟನ್ಗೆ ಕಬ್ಬಿಗೆ 3500 ನಿಗದಿಪಡಿಸಬೇಕು. ಚಿಂಚೋಳಿ ತಾಲೂಕಿನ ಕಾರ್ಖಾನೆ ನೆನೆಗುದಿಗೆ ಬಿದ್ದು ಸುಮಾರು 15 ವರ್ಷಗಳಾಗಿವೆ. ಕಬ್ಬು ಬೆಳೆಗಾರರಿಗೆ ತೊಂದರೆಯಾಗಿದ್ದು, ಕೂಡಲೇ ಇಲ್ಲಿನ ಕಾರ್ಖಾನೆ ಆರಂಭಿಸಬೇಕು ಇಲ್ಲವೆ ಆ ಕಾರ್ಖಾನೆಯ ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಕೋರಗ್ರೀನ್ ಸಕ್ಕರೆ ಕಾರ್ಖಾನೆಯಿಂದ ಕೆಲವು ರೈತರಿಗೆ ಕಬ್ಬಿನ ಹಣ ಪೂರ್ತಿ ಸಂದಾಯವಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಲು ಆದೇಶಿಸಬೇಕು. ಕಟಾವು ಸಮಯದಲ್ಲಿ ಕಾರ್ಮಿಕರು ಮತ್ತು ಲಾರಿಯವರು ರೈತರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿರುವುದರಿಂದ ಇದನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿವರ್ಷ ಕಬ್ಬು ಕಟಾವು ಆದ ನಂತರ ಕಾನೂನು ಬದ್ಧವಾಗಿ 15 ದಿನದೊಳಗೆ ಕಬ್ಬಿನ ಬಿಲ್ಲು ಸಂಪೂರ್ಣ ಪಾವತಿ ಮಾಡಬೇಕು. ರೈತರ ಕಬ್ಬು ಯಾವುದೇ ಕಾರಣದಿಂದ ಕಟಾವು ಮಾಡಲು ಆಗದಿದ್ದರೆ ಕಾರ್ಖಾನೆಯಿಂದ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು.
ಒಂದು ವಾರದೊಳಗೆ ಗುಲ್ಬರ್ಗ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಕಬ್ಬಿನ ದರ ನಿಗದಿ ಮಾಡದಿದ್ದರೆ ಜಿಲ್ಲೆಯ ಎಲ್ಲ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಂತವೀರ ಪಾಟೀಲ್ ಧಸ್ತಾಪುರ, ಶಿವಲಿಂಗಪ್ಪ ಚೋರಗುಸ್ತಿ, ಬಸವರಾಜ ಪವಾಡಶೆಟ್ಟಿ, ಬಸವಂತರಾವ ಏರಿ, ಮಹಾದೇವಪ್ಪ ಪರಗೊಂಡ, ನರಹರಿ ಪಾಟೀಲ್, ರಾಮಚಂದ್ರ ಪಾಟೀಲ್, ಪ್ರಕಾಶ ಕುಲಕರ್ಣಿ, ಶಾಂತವೀರಪ್ಪ ಹೆಬ್ಬಾಳ, ರಾಜು ಕುಲಕರ್ಣಿ ಉಪಸ್ಥಿತರಿದ್ದರು.