ಗ್ರಂಥಾಲಯ ಕಟ್ಟಡ ಉದ್ಘಾಟನೆ ಎಂದು?
ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ಅ.26
ಒಂದೆಡೆ ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣಗೊಂಡು ಎರಡು ವರ್ಷವಾದರೂ ಉದ್ಘಾಟನೆ ಕಂಡಿಲ್ಲ. ಇನ್ನೊಂದೆಡೆ ಮಳೆಗೆ ಸೋರುತ್ತಿರುವ ಹಳೆ ಗ್ರಂಥಾಲಯ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಅಮೂಲ್ಯ ಪುಸ್ತಕಗಳು ಗೆದ್ದಲು ಹಿಡಿಯುತ್ತಿವೆ.
- ಜಿಲ್ಲಾ ಗ್ರಂಥಾಲಯ ಇಲಾಖೆ ನಗರದ ಪುಟ್ಟರಾಜ ಗವಾಯಿಗಳ ಉದ್ಯಾನವನದ ಪಕ್ಕದಲ್ಲಿರುವ ತಾಲೂಕು ಕೇಂದ್ರ ಗ್ರಂಥಾಲಯವನ್ನು ನಿರ್ಲಕ್ಷಿಸಿರುವ ಪರಿಗೆ ಸಾಕ್ಷಿ ಇದು.
ಇದ್ದೂ ಇಲ್ಲದಂತಿರುವ ಗ್ರಂಥಾಲಯ: ಗ್ರಂಥಾಲಯದಲ್ಲಿ ಒಬ್ಬ ಸಿಬ್ಬಂದಿ ಹೊರತುಪಡಿಸಿ ಗ್ರಂಥಪಾಲಕರಿಲ್ಲ. ಮುರಿದು ಹೋದ ರ್ಯಾಕ್ಗಳಲ್ಲಿ ಹಳೆಯ ಪುಸ್ತಕಗಳನ್ನು ಜೋಡಿಸುವುದೇ ಸಮಸ್ಯೆಯಾಗಿರುವಾಗ, ಇನ್ನು ಹೊಸ ಪುಸ್ತಕ ಇಡಲು ಜಾಗವಿಲ್ಲದೆ ಮೂಟೆಯಲ್ಲಿ ತುಂಬಿ ಕಟ್ಟಿ ಎಸೆಯಲಾಗಿದೆ. ಗ್ರಂಥಾಲಯ ಸದಸ್ಯರಾಗಿ ಹೊಸ ಪುಸ್ತಕ ಪಡೆಯೋಣವೆಂದರೂ ಅವಕಾಶ ಇಲ್ಲ. ಇಲ್ಲಿನ ಗ್ರಂಥಾಲಯ ಇದ್ದೂ ಇಲ್ಲದಂತಿದೆ.
ಹೊಸ ಪುಸ್ತಕ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಗ್ರಂಥಾಲಯಕ್ಕೆ ದಿನವೂ ಬರುವ ನೂರಾರು ಓದುಗರು ನಿರಾಶೆಯಿಂದ ಹೊರ ನಡೆಯುತ್ತಿದ್ದಾರೆ. ಈ ಬಗ್ಗೆ ಸಿಬ್ಬಂದಿಗೆ ಕೇಳಿದರೆ ಅವರಿಂದ ಸಮರ್ಪಕ ಉತ್ತರ ಬರುತ್ತಿಲ್ಲ.
ಮಾಹಿತಿ ನೀಡದ ಅಧಿಕಾರಿ: ಹಳೆ ಗ್ರಂಥಾಲಯ ಸೋರುತ್ತಿದೆ, ಪುಸ್ತಕಗಳನ್ನಿಡಲು ಸರಿಯಾದ ವ್ಯವಸ್ಥೆ ಇಲ್ಲ ಹೊಸ ಗ್ರಂಥಾಲಯ ಕಟ್ಟಡ ಉದ್ಘಾಟನೆ ಯಾವಾಗ ಎಂದು ಜಿಲ್ಲಾ ಗ್ರಂಥಾಲಯ ಅಧಿಕಾರಿ ಎಂ.ಎಸ್.ರವಿನಾಳ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರೆ ಸರಿಯಾದ ಮಾಹಿತಿ ನೀಡದೇ ನುಣುಚಿಕೊಳ್ಳುತ್ತಿದ್ದಾರೆಂದು ಗ್ರಂಥಾಲಯದ ಓದುಗರೊಬ್ಬರು ಪತ್ರಿಕೆಗೆ ತಿಳಿಸಿದರು.
ಸಾಯಂಕಾಲ ಗ್ರಂಥಾಲಯದ ಸಮಯದಲ್ಲಿ ವಿದ್ಯುತ್ ಕೈಕೊಟ್ಟರೆ ಓದುಗರು ಬೆಳಕಿನ ಕೊರತೆಯಿಂದ ಹೊರ ನಡೆಯುತ್ತಾರೆ. ಗ್ರಂಥಾಲಯ ಕಟ್ಟಡ ನಿರ್ಮಾಣಗೊಂಡು ವರ್ಷಗಳು ಉರುಳಿದರೂ ಸರ್ಕಾರದಿಂದ ಬಂದ ಪುಸ್ತಕಗಳನ್ನು ಸೋರುತ್ತಿರುವ ಹಳೆಯ ಕಟ್ಟಡದಲ್ಲಿ ಕೊಳೆಸುತ್ತಿರುವುದರ ಹಿಂದಿನ ಮರ್ಮವೇನು ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದರು.
ನೂತನ ಗ್ರಂಥಾಲಯ ಕಟ್ಟಡವನ್ನು ವಾರದೊಳಗೆ ಉದ್ಘಾಟಿಸಬೇಕು. ಇಲ್ಲದಿದ್ದರೆ ಗ್ರಂಥಾಲಯ ಮುಂಭಾಗದಲ್ಲಿ ಓದುಗರೊಂದಿಗೆ ವಿನೂತನ ಪ್ರತಿಭಟನೆ ನಡೆಸಲಾಗುವುದು ಸಾರ್ವಜನಿಕರೊಬ್ಬರು ಎಚ್ಚರಿಸಿದರು.