ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಲಿತರಿಗೆ ಬಹಿಷ್ಕಾರ: ಮುಖಂಡರ ಖಂಡನೆ

Rashmi Kasaragodu
Updated On : 27 Oct 2013, 12:53 pm

ಮಸ್ಕಿ: ಮಾನ್ವಿ ತಾಲೂಕಿನ ಹಿರೇಬಾದರದಿನ್ನಿ ಗ್ರಾಮದ ದಲಿತ ಯುವಕನಿಗೆ ಕ್ಷೌರಮಾಡಲು ನಿರಾಕರಿಸಿದ ಘಟನೆಯನ್ನು ಇಲ್ಲಿನ ದಲಿತ ಮುಖಂಡರು ಖಂಡಿಸಿದ್ದಾರೆ. ದಲಿತ ಯುವಕ ಪರಶುರಾಮನಿಗೆ ಕ್ಷೌರಕ್ಕೆ ನಿರಾಕರಿಸಿದ್ದಲ್ಲದೇ ಗ್ರಾಮದಲ್ಲಿ ದಲಿತರಿಗೆ ಹೋಟೆಲ್ ಹಾಗೂ ಹಿಟ್ಟಿನ ಗಿರಣಿಯಲ್ಲಿ ದಲಿತರ ಪ್ರವೇಶ ನಿರಾಕರಿಸಲಾಗಿದೆ. ಈ ಘಟನೆಗೆ ಕಾರಣರಾಗಿರುವವರನ್ನು ಗಡಿಪಾರು ಮಾಡುವಂತೆ ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ನಾಗಪ್ಪ ತತ್ತಿ, ಸುರೇಶ ಅಂತರಗಂಗಿ ಮತ್ತಿತರರು ಇದ್ದರು.
ಇಂದು ಕಾರ್ಯಾಗಾರ
ರಾಯಚೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ನ್ಯಾಯವಾದಿಗಳ ಸಂಘ ಮತ್ತು ಶಿಕ್ಷಣ ಇಲಾಖೆ ಮತ್ತು ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯಡಿ ಮಕ್ಕಳ ಕಾಳಜಿ ಹಾಗೂ ರಕ್ಷಣೆ ಕುರಿತ ಕಾರ್ಯಾಗಾರವನ್ನು ಅ.27ರಂದು ನಗರದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದು, ಕಾರ್ಯಾಗಾರವನ್ನು ಹೈಕೋರ್ಟ್ ನ್ಯಾಯಾಧೀಶ ಹುಲವಾಡಿ ಜಿ. ರಮೇಶ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಕೃಷ್ಣಭಟ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ನಾಗರಾಜು, ಜಿಪಂ ಸಿಇಒ ಡಾ.ಮುದ್ದುಮೋಹನ್, ಎಸ್ಪಿ ಎಂ.ಎನ್. ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎನ್. ಭಾನುರಾಜ್ ಪಾಲ್ಗೊಳ್ಳಲಿದ್ದಾರೆ. ಭಾಷಣಕಾರರಾಗಿ ದೊರೆಸ್ವಾಮಿ, ಡಾ. ಬಿ.ರಮೇಶ ಬಾಬು, ರಾಘವೇಂದ್ರ ಭಟ್, ಬಿಇಒ ಮಲ್ಲಿಕಾರ್ಜುನ ಆಗಮಿಸಲಿದ್ದಾರೆ.
ಆಧಾರ್: ನಾಳೆ ಸಭೆ
ರಾಯಚೂರು: ಜಿಲ್ಲೆಯಲ್ಲಿ 2ನೇ ಹಂತದ ಆಧಾರ ಯೋಜನೆಗೆ ಸಂಭಂದಿಸಿ ಅ.28ರಂದು ಮಹತ್ವದ ಸಭೆ ಕರೆಯಲಾಗಿದೆ. ಅಂದು ಸಂಜೆ 4ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಯುಐಡಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ನಡೆಯಲಿದ್ದು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ಹೆಚ್ಚುವರಿ ಡಿಸಿ ತಿಮ್ಮಪ್ಪ ತಿಳಿಸಿದ್ದಾರೆ.
30ರಂದು ಸಭೆ
ರಾಯಚೂರು: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯು ಅ. 30ರಂದು ನಡೆಯಲಿದೆ. ಅಂದು ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಸಂಸದ ಸಣ್ಣ ಪಕೀರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಜಿಪಂ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement