ರಸ್ತೆ ಅಗಲೀಕರಣಕ್ಕೆ ಗ್ರಾಪಂ ನಿಯೋಗ ಒತ್ತಾಯ: ಮನವಿ
ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಾಲಹಳ್ಳಿ ಗ್ರಾಪಂ ಸದಸ್ಯರ ನಿಯೋಗವು ಸಹಾಯಕ ಆಯುಕ್ತೆ ಮಂಜುಶ್ರೀ ಮನವಿ ಸಲ್ಲಿಸಿತು.
ಪಟ್ಟಣದಲ್ಲಿ ಶನಿವಾರ ಸಹಾಯಕ ಆಯುಕ್ತೆ ಮಂಜುಶ್ರೀ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು, ಜಾಲಹಳ್ಳಿ ಗ್ರಾಮದ ಪ್ರಮುಖ ರಸ್ತೆ ಅಂಬೇಡ್ಕರ ವೃತ್ತದಿಂದ ಶ್ರೀರಂಗನಾಥ ದೇವಸ್ಥಾನದವರೆಗೆ ಮತ್ತು ಅಲ್ಲಿಂದ ಬುಳ್ಳಯ್ಯನ ಕಟ್ಟೆವರೆಗೆ ಹಾಗೂ ಮುಖ್ಯ ರಸ್ತೆಯಿಂದ ಸಂತೆ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಶ್ರೀ ರಂಗನಾಥ ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ಹಾಗೂ ಇನ್ನೂಳಿದ ಕೆಲವು ಮುಖ್ಯ ರಸ್ತೆಗಳನ್ನು ಅಗಲೀಕರಣ ಮಾಡುವಂತೆ ಆಗ್ರಹಿಸಿದರು.
ಗ್ರಾಮದಲ್ಲಿ ಕೈಗೊಂಡಿರುವ ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಎಸಗಲಾಗಿದೆ. ಬಡವರ ಮನೆ, ಅಂಗಡಿಗಳು ತೆರವು ಮಾಡಿದರೆ, ಕೆಲ ಶ್ರೀಮಂತರ ಮನೆ, ಅಂಗಡಿಗಳು ಹಾಗೆಯೇ ಬಿಡಲಾಗಿದೆ. ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದು ಒಂದು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಗ್ರಾಪಂ ಸದಸ್ಯರ ನಿಯೋಗ ಆರೋಪಿಸಿದೆ.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞರಾವ್ ದೇಸಾಯಿ, ಹನಮಗೌಡ ಮದರಕಲ್, ಕೆ. ಜಂಬಣ್ಣ ನೀಲಗಲ್, ವಾಸುದೇವ ಕೋಲ್ಕಾರ, ವೆಂಕೋಬ ಜಿ. ದೊಡ್ಡ ಮುದ್ದುರಂಗಪ್ಪ, ಸುರೇಶ ಪೂಜಾರಿ, ಗೋವಿಂದಪ್ಪ ಸೇರಿದಂತೆ ಅನೇಕರಿದ್ದರು.