ಸಫಾಯಿ ಕರ್ಮಚಾರಿಗಳ ಮೇಲೆ ದೌರ್ಜನ್ಯ ;ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ ಟಿ ರಾಯಚೂರು ಟಿ ಅ.26
ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಅಸುರಕ್ಷಿತ ಪರಿಸರದಲ್ಲಿ ಸಫಾಯಿ ಕರ್ಮಚಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ವೃತ್ತಿಯಲ್ಲಿರುವವರನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕೀಳಾಗಿ ಕಾಣುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೇಳಿಬಂತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಎನ್. ರಾಮುಲು ಕರೆದಿದ್ದ ಅಧಿಕಾರಿಗಳ ಹಾಗೂ ಸಫಾಯಿ ಕರ್ಮಚಾರಿಗಳ ಸಭೆಯಲ್ಲಿ ಇಂಥ ಆರೋಪ ಕೇಳಿಬಂದು, ಅಧಿಕಾರಿಗಳಿಂದಾಗಿ ಕರ್ಮಚಾರಿಗಳು ಸೌಲಭ್ಯಗಳಿಂದ ದೂರವೇ ಉಳಿಯುವಂತಾಗಿದೆ ಎಂದು ದೂರಲಾಯಿತು.
ಸಾಲದ ಅನುದಾನ ದುರುಪಯೋಗ: ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆಯ ಜೆ.ಬಿ.ರಾಜು, ಸಫಾಯಿ ಕರ್ಮಚಾರಿ ಸಂಘದ ಭಾಸ್ಕರಬಾಬು, ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಜನಾರ್ದನ ಹಳ್ಳಿಬೆಂಚಿ ಮತ್ತಿತರರು, ಸಾಲ ಪಡೆಯದ ಸಫಾಯಿ ಕರ್ಮಚಾರಿಗಳಿಗೆ ಸಾಲ ಮನ್ನಾ ಆಗಿದೆ ಎಂಬ ಪತ್ರ ಕಳಿಸಲಾಗಿದೆ. ಸಾಲದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ದೂರಿದರು.
ನಗರಸಭೆಯಿಂದ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನವನ್ನು ಬೇರೆಯವರಿಗೆ ನೀಡಲಾಗಿದೆ. ಸರ್ಕಾರ ಸಫಾಯಿ ಕರ್ಮಚಾರಿಗಳ ಪಟ್ಟಿಯನ್ನು ಕೇಳಿದಾಗಲೂ ತಪ್ಪು ಮಾಹಿತಿ ನೀಡುವ ಕಾರ್ಯ ಜಿಲ್ಲೆಯ ಅಧಿಕಾರಿಗಳು ಮಾಡಿದ್ದಾರೆಂದು ಟೀಕಿಸಿದರು.
ಕೋರ್ಟ್ ಆದೇಶ ಉಲ್ಲಂಘನೆ: ನಗರಸಭೆಯಲ್ಲಿ ಕಾಯಂ ಮಾದರಿಯ ಕೆಲಸಗಳಿಗೂ ಹೊರಗುತ್ತಿಗೆಯ ಮೂಲಕ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ನಗರಸಭೆಯಲ್ಲಿ ಯಾವುದೇ ರೀತಿಯ ಅಡಚಣೆಯಿಲ್ಲ. ಆದರೆ ನಗರಸಭೆಯ ಆಡಳಿತವು ಕಾರ್ಮಿಕರಿಗೆ ವೇತನ ಪಾವತಿ ವೇಳೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆಂದು ದೂರಿದರು.
ನಗರಸಭೆಯಿಂದ ಕುಡಿವ ನೀರಿನ ನಿರ್ವಹಣೆಯ ಕರ್ತವ್ಯದ ಮೇಲೆ ನಿಯೋಜಿತನಾಗಿದ್ದ ಪೌರ ನೌಕರನೊಬ್ಬ ಕರ್ತವ್ಯದಲ್ಲಿದ್ದಾಗಲೇ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ಆಡಳಿತ ಇದುವರೆಗೆ ಪರಿಹಾರ ನೀಡಿಲ್ಲ ಎಂದು ಸಭೆಯಲ್ಲಿ ಸಂಘಟನೆಗಳ ಪ್ರಮುಖರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ರಾಮುಲು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಚೆಕ್ ಮೂಲಕ ವೇತನ ಪಾವತಿಸಿ: ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಕುರಿತು ಮಾತನಾಡಿದ ಅವರು, ಪೌರಕಾರ್ಮಿಕರಿಗೆ ವೇತನವನ್ನು ಚೆಕ್ ಮೂಲಕ ಪಾವತಿಸಬೇಕು. ಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳನ್ನು ಕರ್ತವ್ಯ ನಿರ್ವಹಣೆ ವೇಳೆ ಬಳಕೆಗೆ ಒದಗಿಸಬೇಕು. ಸಫಾಯಿ ಕಾರ್ಮಿಕರ ಕುಟುಂಬಗಳ ಬಗ್ಗೆ ಸಮರ್ಪಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದರು.
ಪೌರಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯ ದೊರಕಿಸಿಕೊಡುವುದು ಅಧಿಕಾರಿಗಳ ಹೊಣೆ. ಇಎಸ್ಐ, ಪಿಎಫ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗುತ್ತಿಗೆದಾರರು ನೀಡುತ್ತಿರುವ ಬಗ್ಗೆ ಅಧಿಕಾರಿಗಳು ಖಾತರಿ ಪಡಿಸಿಕೊಳ್ಳಬೇಕು. ಕಾರ್ಮಿಕರಿಗೆ ಅಗತ್ಯ ಸಂದರ್ಭದಲ್ಲಿ ವೇತನ ಸಹಿತ ರಜೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ನಾಗರಾಜು, ಸಹಾಯಕ ಆಯುಕ್ತೆ ಮಂಜುಶ್ರೀ, ನಗರಸಭೆ ಆಯುಕ್ತ ಬಸಪ್ಪ, ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ ಸೇರಿ ಅನೇಕರು ಸಭೆಯಲ್ಲಿದ್ದರು.