ಹೆಚ್ಚುತ್ತಿರುವ ವಿಚ್ಛಿದ್ರಕಾರಿ ಶಕ್ತಿ
ಆರ್ಎಸ್ಎಸ್ನ ಸಮಾರಂಭದಲ್ಲಿ ನಾಗಿರೆಡ್ಡಿ ಕಳವಳ
ಮಸ್ಕಿ: ದೇಶದಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ಹೆಚ್ಚುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಇದು ಮಾರಕ ಬೆಳವಣಿಗೆ ಎಂದು ಆರ್ಎಸ್ಎಸ್ ಬೀದರ್ ವಿಭಾಗಮಟ್ಟದ ಸಂಚಾಲಕ ಹಾಗೂ ವಕ್ತಾರ ನಾಗಿರೆಡ್ಡಿ ಹೇಳಿದರು.
ಪಟ್ಟಣದ ಭ್ರಮರಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಸ್ಕಿಯ ಆರ್ಎಸ್ಎಸ್ ಘಟಕದಿಂದ ಏರ್ಪಡಿಸಿದ್ದ ಆರ್ಎಸ್ಎಸ್ನ ಪ್ರಾಥಮಿಕ ಶಿಕ್ಷಾ ವರ್ಗದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಾ ವರ್ಗದ ತರಬೇತಿಯಲ್ಲಿ ಬೌದ್ಧಿಕ, ಶಾರೀರಿಕ, ಸಾಮಾಜಿಕ ಶಿಕ್ಷಣದ ಜತೆಗೆ ಸೇವಾ ಶಿಕ್ಷಣವನ್ನು ನೀಡಲಾಗುವುದು, ಮನಸ್ಸನ್ನು ಅರಳಿಸಿ ದೇಶಭಕ್ತಿ ಹೆಚ್ಚಿಸುವ ದೇಶಪ್ರೇಮಿಗಳ ಕಥೆಗಳು, ದೇಶದ ವೈಭವವನ್ನು ಸಾರುವ ಸಂದೇಶಗಳು, ಸಾಮಾಜಿಕ ಜೀವನದ ಪಾಠಗಳನ್ನು ಶಿಬಿರಾರ್ಥಿಗಳಿಗೆ ಭೋದಿಸಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಾಗಿದ್ದರೂ ರಾಜಕಾರಣಿಗಳು ಮತ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವುದು ವಿಷಾದನೀಯ. ಮಸ್ಕಿಯ ಸ್ವಯಂ ಸೇವಾ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಶರಣಪ್ಪ ಇತ್ಲಿ, ಪ್ರಾಶಿಕ್ಷಣದ ವರ್ಗಾಧಿಕಾರಿ ಸುಕುಮುನಿಯಪ್ಪ ನಾಯಕ ಮತ್ತಿತರರಿದ್ದರು. ಅಧ್ಯಕ್ಷತೆಯನ್ನು ಪ್ರಕಾಶ ಧಾರಿವಾಲ್ ವಹಿಸಿದ್ದರು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.