ಗುಂಪು ರಾಜಕಾರಣದಿಂದ ಅಭಿವೃದ್ಧಿ ಕುಂಠಿತ: ಶೇಷಗಿರಿರಾವ್
ಸಿಂಧನೂರು: ನಗರದಲ್ಲಿ ಕಳೆದ 30 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ಗುಂಪು ರಾಜಕಾರಣದಲ್ಲಿ ಸಮಯ ಕಳೆದರೇ ವಿನಃ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್ ಆರೋಪಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ ಅನೇಕ ಹಿರಿಯ ರಾಜಕಾರಣಿಗಳಿದ್ದು, ಅಪಾರ ಅನುಭವವಿದೆ. ಆದರೆ ಅವರ ಅನುಭವ ಸಿಂಧನೂರಿನ ಅಭಿವೃದ್ಧಿಗೆ ಬಳಕೆ ಆಗುತ್ತಿಲ್ಲ. ಇಲ್ಲಿನ ಮುಖ್ಯರಸ್ತೆಗಳು ಕೆಸರು ಗದ್ದೆಗಳಾಗಿವೆ. ಎಲ್ಲ ವಾರ್ಡುಗಳ ಚರಂಡಿ ತುಂಬಿ ಗಬ್ಬು ನಾರುತ್ತಿವೆ. ಶೌಚಾಲಯಗಳಂತೂ ಸರಿಯಾಗಿ ನಿರ್ವಹಣೆ ಇಲ್ಲದೇ ಹಾಳಾಗಿ ಹೋಗಿವೆ. ಬೀದಿದೀಪದ ವ್ಯವಸ್ಥೆ ಅಧೋಗತಿಗೆ ತಲುಪಿದೆ ಎಂದು ಟೀಕಿಸಿದರು.
ಶಾಸಕ ಬಾದರ್ಲಿ ವಿಫಲ: ನಗರಸಭೆಯಿಂದ ಹಿಡಿದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಸಿಂಧನೂರು ತಾಲೂಕಿಗೆ ಹತ್ತಿದ್ದ ಶಾಪ ವಿಮೋಚನೆಗೊಂಡು ಆಡಳಿತ ಪಕ್ಷದ ಶಾಸಕರೇ ಅಧಿಕಾರಕ್ಕೆ ಬಂದಿದ್ದಾರೆ. 6 ತಿಂಗಳು ಆಗುತ್ತಾ ಬಂದರೂ ರಸ್ತೆಗಳನ್ನು ಕನಿಷ್ಠ ಪಕ್ಷ ದುರಸ್ತಿ ಮಾಡಲು ಶಾಸಕ ಹಂಪನಗೌಡ ಬಾದರ್ಲಿ ವಿಫಲರಾಗಿದ್ದಾರೆ. ನಾಡಗೌಡರ ಅವಧಿಯಲ್ಲಾದ ಯೋಜನೆಗಳಿಗೆ ಮುಖ್ಯಮಂತ್ರಿಗಳನ್ನು ಕರೆಯಿಸಿ ಉದ್ಘಾಟನೆ ಮಾಡಿಸಿದ್ದೇ ಅವರ ದೊಡ್ಡ ಸಾಧನೆಯಾಗಿದೆ ಎಂದು ಕೊಲ್ಲಾ ಲೇವಡಿ ಮಾಡಿದರು.
ರಾಜ್ಯದಲ್ಲಿ ಅಕ್ಕಿ ಲೆವಿ ಈ ಮೊದಲು 2 ಲಕ್ಷ ಟನ್ ಇತ್ತು. ಈಗ ಸರ್ಕಾರ 13 ಲಕ್ಷ ಟನ್ಗೆ ಹೆಚ್ಚಿಸಿದೆ. ಇದರಿಂದ ಅಕ್ಕಿ ಮಿಲ್ಲರ್ಗಳು ಕಂಗಾಲಾಗಿದ್ದಾರೆ. ಬತ್ತದ ಬೆಲೆ ಸಂಪೂರ್ಣ ಕುಸಿದಿದ್ದು ಕನಿಷ್ಠ 2 ಸಾವಿರ ಬೆಂಬಲ ಬೆಲೆ ನೀಡಬೇಕು.
ಮುತ್ತಿಗೆ ಹಾಕುವ ಎಚ್ಚರಿಕೆ: ಆವರ್ತನಿಧಿ ಹಣ ಇಟ್ಟಿದ್ದರೆ ಕೂಡಲೇ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ತಾಲೂಕಿನ ಆಡಳಿತದ ಅವ್ಯವಸ್ಥೆ ಕುರಿತು ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಚರ್ಚಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ತದನಂತರವೂ ಅವ್ಯವಸ್ಥೆ ಮುಂದುವರೆದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರಾಜ್ಯಕ್ಕೆ ನ.17ರಂದು ಆಗಮಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದ ಕೊಲ್ಲಾ ಶೇಷಗಿರಿರಾವ್ ಮುಂದಿನ ದಿನಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಕರೆದು ಪಕ್ಷ ಸಂಘಟನೆಗೆ ತೊಡಲಾಗುವುದು ಎಂದು ಹೇಳಿದರು.
ಕಾಮಗಾರಿ ವೀಕ್ಷಿಸಲಿ: ಬಿಜೆಪಿನಗರ ಘಟಕದ ಅಧ್ಯಕ್ಷ ಮಧ್ವರಾಜ್ ಆಚಾರ್ ಮಾತನಾಡಿ, ಆದರ್ಶ ಕಾಲೋನಿಯ ಡಾಂಬರ್ ರಸ್ತೆ ಕಿತ್ತು ಹೋಗಿದ್ದು, ಮರಮ್ ಹಾಕಿ ರಸ್ತೆಯನ್ನು ಹದಗೆಡಿಸಲಾಗಿದೆ. ಕೋಟ್ಯಾಧೀಶರಿರುವ ಆ ಕಾಲೋನಿಯಲ್ಲಿ ಮನೆಗೆರಡು ಕಾರುಗಳಿವೆ. ಡಾಲರ್ಸ್ ಕಾಲೋನಿ ಎಂದೇ ಕರೆಯಲಾಗುವ ಆದರ್ಶ ಕಾಲೋನಿಯ ರಸ್ತೆಗಳನ್ನು ಮಳೆಗಾಲದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷ ಜಾಫರ ಜಾಗೀರದಾರ ಪಾದಯಾತ್ರೆ ನಡೆಸುವ ಮೂಲಕ ವೀಕ್ಷಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಅಶೋಕ ಉಮಲೂಟಿ ಮಾತನಾಡಿ, ಪಿಡಬ್ಲ್ಯೂಡಿ ರಸ್ತೆಗಳಿಗೆ ಎಲ್ಲಿಯೂ ಡಾಂಬರ್ ಹಾಕಿಲ್ಲ. ತೆಗ್ಗು ದಿನ್ನೆಗಳನ್ನು ಮುಚ್ಚಿಲ್ಲ. ಆದರೆ ಇಲಾಖೆ ರಸ್ತೆ ದುರಸ್ತಿ ನೆಪದಲ್ಲಿ 50 ಲಕ್ಷ ಬಿಲ್ ಮಾಡಲು ತಯಾರಿ ನಡೆಸಿದೆ. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಬಹಿರಂಗವಾಗಿ ಲೆಕ್ಕಪತ್ರ ನೀಡಲಿ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ನಗರ ಘಟಕದ ಕಾರ್ಯದರ್ಶಿ ಸುಬ್ಬಾರಾವ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಅಶೋಕ ಉಮಲೂಟಿ, ಅಧ್ಯಕ್ಷ ದೇವೆಂದ್ರಪ್ಪ ಯಾಪಲಪರ್ವಿ, ನಗರಘಟಕ ಕಾರ್ಯದರ್ಶಿ ಸುಬ್ಬರಾವ್ ಉಪಸ್ಥಿತರಿದ್ದರು.