ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನ.1ಕ್ಕೆ ಕನ್ನಡ ರಾಜ್ಯೋತ್ಸವ ಸಮಾರಂಭ

Lingaraj Badiger
Updated On : 30 Oct 2013, 11:45 am

ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರ ಶಾಸಕ ಡಾ.ಎಸ್. ಶಿವರಾಜ್ ಪಾಟೀಲ್ ವಹಿಸಲಿದ್ದಾರೆ. ಸಂಸದರಾದ ಸಣ್ಣಫಕೀರಪ್ಪ ಹಾಗೂ ಶಿವರಾಮಗೌಡ, ಜಿಪಂ ಅಧ್ಯಕ್ಷ ಲಲಿತಮ್ಮ ಲಿಂಗರಾಜು, ಶಾಸಕರಾದ ಎ.ವೆಂಕಟೇಶ ನಾಯಕ, ಹಂಪನಗೌಡ ಬಾದರ್ಲಿ, ಜಿ.ಹಂಪಯ್ಯ ನಾಯಕ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 7.30ಕ್ಕೆ ನಗರದ ಕರ್ನಾಟಕ ಸಂಘದಲ್ಲಿ ನಾಡದೇವಿ ಭುವನೇಶ್ವರಿ ಮಾತೆಗೆ ಪೂಜೆ ನಂತರ ಕರ್ನಾಟಕ ಸಂಘದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಭುವನೇಶ್ವರಿ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಗರಸಭೆ ಅಧ್ಯಕ್ಷರಿಗೆ ಬಿಜೆಪಿ ಬೆಂಬಲ
ರಾಯಚೂರು: ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮಾನ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಿಜೆಪಿ ಪಕ್ಷದ ಸದಸ್ಯರು ನಗರಸಭೆ ಅಧ್ಯಕ್ಷೆ ಮಹಾದೇವಮ್ಮ ಅವರಿಗೆ ಬೆಂಬಲಿಸುವುದಾಗಿ ನಗರಸಭೆಯ ಸದಸ್ಯ ನರಸಪ್ಪ ಯಕ್ಲಾಸಪುರ ತಿಳಿಸಿದರು. ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ದೂರವುಳಿಯುವ ಉದ್ದೇಶದಿಂದ ಅಧ್ಯಕ್ಷೆ ಮಹಾದೇವಮ್ಮ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ. ವರಿಷ್ಠರ ಸೂಚನೆಯಂತೆಯೇ ನಗರಸಭೆ ಅಧ್ಯಕ್ಷರೊಂದಿಗೆ ಗುರುತಿಸಿಕೊಳ್ಳುತ್ತಿರುವುದಾಗಿ ಹೇಳಿದರು.
ನಾಳೆ ಸಾಮಾನ್ಯ ಮಹಾ ಸಭೆ
ರಾಯಚೂರು: ಇಲ್ಲಿನ ನಗರಸಭೆಯ ಸಾಮಾನ್ಯ ಮಹಾಸಭೆಯನ್ನು ಅ.31ರಂದು ಕರೆಯಲಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ. ಅಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಹೊಸ ಕಟ್ಟಡದ ಮೇಲ್ಬಾಗದಲ್ಲಿ ನಗರಸಭೆಯ ಸಾಮಾನ್ಯ ಮಹಾಸಭೆ ಆಯೋಜಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement