ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆ ವಾಣಿಜ್ಯೋದ್ಯಮ ಸಂಘದಿಂದ ಪದಗ್ರಹಣ

Lingaraj Badiger
Updated On : 30 Oct 2013, 11:45 am

ರಾಯಚೂರು: ಜಿಲ್ಲಾ ವಾಣಿಜ್ಯೋದ್ಯಮ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ನೂತನ ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಅ.31 ರಂದು ಸಂಜೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ, ನಗರದ ರಂಗಮಂದಿರದಲ್ಲಿ ಅ.31 ರಂದು ಸಂಜೆ 6.30ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ತಜ್ಞರು, ಉಪನ್ಯಾಸಕರ ಆಗಮನ: ಜಿಲ್ಲೆಯಲ್ಲಿ ಈಚೆಗೆ ವಿವಿಧ ಚುನಾವಣೆಗಳಲ್ಲಿ ಆಯ್ಕೆಯಾದ ಶಾಸಕರು, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಜಿಪಂ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಲಾಗುತ್ತದೆ. ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಸೇರಿದ ಸಂಘದ ವಲಯದ ವ್ಯಾಪ್ತಿಯ ಸದಸ್ಯರು ಹಾಗೂ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಫ್‌ಕೆಸಿಸಿಐ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಸೇರಿ ಅನೇಕ ತಜ್ಞರು ಹಾಗೂ ಉಪನ್ಯಾಸಕರು ಆಗಮಿಸಲಿದ್ದಾರೆಂದು ಹೇಳಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಘವು ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯ ಸಮಗ್ರ ಪ್ರಗತಿಗೆ ಪೂರಕ ಅಭಿವೃದ್ಧಿಗೆ ನಿರಂತರ ಹೋರಾಡುತ್ತಿದೆ. ಅದರಲ್ಲೂ ರೇಲ್ವೆ ಕಾಮಗಾರಿಗಳು, ನೂತನ ರೈಲು ಸಂಚಾರಕ್ಕೆ ಒತ್ತಾಯದಂಥ ವಿಚಾರಗಳನ್ನು ಮುಂದಿರಿಸಿಕೊಂಡು ಜಿಲ್ಲೆಗೆ ಭೇಟಿ ನೀಡುವ ಎಲ್ಲ ಸಚಿವರಿಗೆ ಮನವಿ ಸಲ್ಲಿಸಿದೆ ಎಂದು ಹೇಳಿದರು.
ರಾಯಚೂರು ಹೊರವಲಯದಲ್ಲಿನ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಮತ್ತಷ್ಟು ಕೈಗಾರಿಕೆಗಳ ಸ್ಥಾಪನೆಗೆ ಪೂರಕ ಚಟುವಟಿಕೆಗಳು ನಡೆಯಬೇಕಿದೆ. ಸೌಲಭ್ಯಗಳನ್ನು ಒದಗಿಸುವ ಕಾರ್ಯವೂ ಆಗಬೇಕಿದೆ. ಸದ್ಯದ 2 ಸಾವಿರ ಎಕರೆ ಜತೆ ಜತೆಗೆ ಮತ್ತೂ ಮೂರು ಸಾವಿರ ಎಕರೆ ಪ್ರದೇಶವನ್ನು ಅಭಿವೃದ್ಧಿ ಕೇಂದ್ರಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆಗಳನ್ನು ಸರ್ಕಾರ ಆರಂಭಿಸಿದೆ. ಆದರೆ ಫಲವತ್ತಾದ ಜಮೀನು ಪ್ರದೇಶವಿರುವುದರಿಂದ ವಿರೋಧ ವ್ಯಕ್ತವಾಗಿದೆ ಎಂದು ಹೇಳಿದರು.
ರೈತರು ಜಮೀನು ನೀಡಲು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಉದ್ದೇಶಿತ ನೂತನ ಕೈಗಾರಿಕಾಭಿವೃದ್ಧಿ ಕೇಂದ್ರಕ್ಕಾಗಿ 3 ಸಾವಿರ ಎಕರೆ ಪ್ರದೇಶವನ್ನು ನಗರದ ಪೂರ್ವಭಾಗದಲ್ಲಿ ಯರಗೇರಾ- ಸಿಂಗನೋಡಿ ಮಧ್ಯದ ಭಾಗದಲ್ಲಿ ಸ್ವಾಧೀನ ಪಡಿಸಿಕೊಳ್ಳಬಹುದಾಗಿದೆ. ಅದ್ದರಿಂದ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಪೂರಕ ಪರಿಸರ ನಿರ್ಮಾಣವಾಗಲಿದೆ ಎಂದರು.
ಅವಕಾಶ ಒತ್ತಾಯ: ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದ ವಸ್ತುಸ್ಥಿತಿ ಅರಿಯಲು ಕೂಡಲೇ ಜಿಲ್ಲಾ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಸಭೆ ನಡೆಸಬೇಕು. ಜಮೀನು ಪಡೆದು ಕೈಗಾರಿಕೆ ಸ್ಥಾಪಿಸಿದ ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸದ್ಯ ಜಮೀನಿಗೆ ಅರ್ಜಿ ಸಲ್ಲಿಸಿರುವರಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾಗಿ ತಿಳಿಸಿದರು.
ಸದ್ಯ ಜಿಲ್ಲೆಯಲ್ಲಿ 83 ಜನ ಕೈಗಾರಿಕೆ ಪ್ರದೇಶದಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಎಂ.ವಿ. ಸಾವಿತ್ರಿ ಅವರ ಅವಧಿಯಲ್ಲಿ 77 ಜನ ಉದ್ಯಮಿಗಳಿಗೆ ಒಟ್ಟು 123 ಎಕರೆ ಜಮೀನು ನಿಗದಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ಅದು ಇದುವರೆಗೆ ಮಂಜೂರಾಗಿ ಮರಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಮುಚ್ಚಿರುವ ಎಂಪಿಸಿಎಲ್ ಕಾರ್ಖಾನೆಯು ನಷ್ಟದಲ್ಲಿರುವ ಹಿನ್ನೆಲೆ ಪುನಾರಂಭ ಕಷ್ಟ ಎಂದು ಹೇಳಲಾಗುತ್ತಿದೆ. ಆದರೆ ಆ ಕಾರ್ಖಾನೆಯ ಕಾರ್ಮಿಕರು ಜಿಲ್ಲಾ ವಾಣಿಜ್ಯೋದ್ಯಮ ಸಂಘವನ್ನು ಸಂಪರ್ಕಿಸಿದಲ್ಲಿ ಸರ್ಕಾರದ ಬಳಿ ಅವರ ಸಮಸ್ಯೆ ಪರಿಹಾರಕ್ಕೆ ಸಂಘ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.
ಅಕ್ಕಿ ಲೆವಿ ಸರಿಯಲ್ಲ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಅಗತ್ಯತೆ ಈಡೇರಿಸಲು ಅಕ್ಕಿ ಗಿರಣಿಗಳ ಮಾಲಿಕರ ಮೇಲೆ ಅಕ್ಕಿ ಲೆವಿ ದುಪ್ಪಟ್ಟುಗೊಳಿಸಿ ಒತ್ತಡ ಹೇರಿರುವುದು ಸರಿಯಲ್ಲ. ಈ ಬಗ್ಗೆ ಎಫ್ ಕೆಸಿಸಿಐ, ಅಕ್ಕಿ ಗಿರಣಿಗಳ ಮಾಲಿಕರ ಸಂಘ ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪ್ರಮುಖರಾದ ಜವಾಹರ ಜೈನ್, ಕಮಲಕುಮಾರ್, ಜಗದೀಶ್ ಗುಪ್ತಾ, ಮೈಲಾಪುರ ಎನ್. ಮೂರ್ತಿ, ಜಂಬಣ್ಣ ಯಕ್ಲಾಸಪುರ ಸೇರಿ ಅನೇಕರಿದ್ದರು.

ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ವಿಶ್ವಾಸ
ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಜಾರಿಗೆ ಸಂಘವು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಸಮಗ್ರ ಪ್ರಗತಿಯೇ ಸಂಘದ ಆಶಯವಾಗಿದ್ದು, ಅನೇಕ ಹೋರಾಟಗಳ ಫಲವಾಗಿ ಸದ್ಯ ರೇಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಶೀಘ್ರದಲ್ಲಿಯೇ ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement