ಲಿಂಗಸ್ಗೂರು: ಮಕ್ಕಳ ಸಮೀಕ್ಷೆ; ಸಹಕಾರಕ್ಕೆ ಮನವಿ
ಲಿಂಗಸ್ಗೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಹಾಗೂ ಕುಟುಂಬ ಸಮೀಕ್ಷೆ ಕಾರ್ಯ ನಡೆಯಲಿದ್ದು ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಎಸ್ಡಿಎಂಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ನೀರಡಗಿ ಮನವಿ ಮಾಡಿದ್ದಾರೆ.
2013- 14ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ನ.6ರಿಂದ 7ರ ವರೆಗೆ ಶಾಲಾ ಸಮೀಕ್ಷೆ ಕಾರ್ಯ ಮತ್ತು ನ.13ರಿಂದ 17ರವರೆಗೆ ಕುಟುಂಬ ಸಮೀಕ್ಷೆ ಕಾರ್ಯ ತಾಲೂಕಿನಾದ್ಯಂತ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ಎಲ್ಲ ಜನವಸತಿ ಪ್ರದೇಶಗಳಲ್ಲಿ ನಡೆಯಲಿದೆ.
ಸಮೀಕ್ಷೆ ಕಾರ್ಯಕ್ಕೆ ಇಬ್ಬರು ಶಿಕ್ಷಕರು, ಒಬ್ಬ ಎನ್ಜಿಒ ಪ್ರತಿನಿಧಿ, ಒಬ್ಬ ಇತರೆ ಇಲಾಖೆಯವರನ್ನು ಒಳಗೊಂಡ 4 ಜನರ ತಂಡ ರಚಿಸಲಾಗುತ್ತದೆ. ಒಟ್ಟು 394 ತಂಡಗಳು ಶಾಲೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯ ನಡೆಸಲಾಗುವುದು. ಕಾರಣ ಸಮೀಕ್ಷೆ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.