ಸಿಎಂಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ತೊಂದರೆ: ಶಿವನಗೌಡ ಆರೋಪ
ರಾಯಚೂರು: ರಾಜ್ಯದಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಹುಕಾಲ ಆಡಳಿತ ನಡೆಸಲು ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಮೋರ್ಚಾದ ಉಪಾಧ್ಯಕ್ಷ ಕೆ. ಶಿವನಗೌಡ ನಾಯಕ ಹೇಳಿದರು.
ನಗರದಲ್ಲಿ ಬುಧವಾರ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ಗುಲ್ಬರ್ಗ ವಿಭಾಗೀಯ ಸಮಿತಿಯಿಂದ ಆಯೋಜಿಸಿದ್ದ ಡಾ. ಅಂಬೇಡ್ಕರರ 57ನೇ ಬೌದ್ಧ ಧಮ್ಮ ದೀಕ್ಷಾ ತಿಂಗಳಾಚರಣೆ ಹಾಗೂ ಸಮಿತಿ ರಾಜ್ಯಾಧ್ಯಕ್ಷ ಎನ್. ಮೂರ್ತಿಗೆ ಡಾ. ಅಂಬೇಡ್ಕರ್ ಮಾನವೀಯ ಪ್ರಶಸ್ತಿ ಮತ್ತು ಬೆಳ್ಳಿ ಪ್ರತಿಮೆ ಪ್ರದಾನ ಮಾಡಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಹುಕಾಲ ಉಳಿಯಲಿಲ್ಲ: ಈ ಹಿಂದೆಯೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕರು ಹೆಚ್ಚು ಕಾಲ ಸಿಎಂ ಸ್ಥಾನದಲ್ಲಿರಲು ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ನೀಡಿಲ್ಲ. ಹಿಂದುಳಿದ ವರ್ಗಗಳ ನಾಯಕರಾಗಿದ್ದ ದೇವರಾಜ ಅರಸು ಮತ್ತು ಬಂಗಾರಪ್ಪ ಅವರೂ ಬಹುಕಾಲ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಲಿಲ್ಲ ಎಂದು ಹೇಳಿದರು.
ಸಾಹಿತಿ ಅಮರೇಶ ಬಲ್ಲಿದವ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಜಾತಿ ವ್ಯವಸ್ಥೆ ಬೀಡು ಬಿಟ್ಟಿದೆ. ಅದರಿಂದ ಸಮಾಜದಲ್ಲಿ ಅಶಾಂತಿ ಪರಿಸರ ನಿರ್ಮಾಣವಾಗಿದೆ. ಬುದ್ಧ, ಅಂಬೇಡ್ಕರ್, ಬಸವಣ್ಣ, ಅಂಬಿಗರ ಚೌಡಯ್ಯ, ವಾಲ್ಮೀಕಿ ಹೀಗೆ ಎಲ್ಲ ಮಹಾನ್ ವ್ಯಕ್ತಿಗಳು ಸಮಾನತೆಯ ಪ್ರತಿಪಾದಕರಾಗಿದ್ದಾರೆಂದರು.
ಸನ್ಮಾನ: ದಸಂಸ ರಾಜ್ಯಾಧ್ಯಕ್ಷ ಎನ್.ಮೂರ್ತಿಗೆ ಈ ವೇಳೆ ದಸಂಸ ಗುಲ್ಬರ್ಗ ವಿಭಾಗೀಯ ಸಂಘಟನೆಯಿಂದ ಮಾನವೀಯ ಪ್ರಶಸ್ತಿ ಹಾಗೂ ಅಂಬೇಡ್ಕರರ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರ ಶಾಸಕ ತಿಪ್ಪರಾಜು ಹವಾಲ್ದಾರ್, ಜಿಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ಕೆ. ಶರಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಆರ್. ತಿಮ್ಮಯ್ಯ, ಕೆಪಿಸಿಸಿ ಎಸ್ಸಿ,ಎಸ್ಟಿ ನೌಕರರ ಸಂಘದ ಅಧ್ಯಕ್ಷ ತಿಮ್ಮಾರೆಡ್ಡಿ, ರಂಗಪ್ಪ ಟೆಕ್ನಿಶನ್, ಮುಖಂಡರಾದ ಸಿದ್ದಲಿಂಗಪ್ಪ, ರಾಮ ಚಂದ್ರರೆಡ್ಡಿ, ಹನುಮಂತಪ್ಪ ಕುಣಿಕಲ್ಲೂರು, ಬಸವರಾಜ ಸಾಸಲಮರಿ ಸೇರಿ ವಿಭಾಗದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ದಲಿತ ಮುಖಂಡರು, ಕಾರ್ಯಕರ್ತರು ಸಮಾರಂಭದಲ್ಲಿದ್ದರು.