6ರಿಂದ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ: ಬಿಇಒ ಅಮರಪ್ಪ
ಸಿಂಧನೂರು: ತಾಲೂಕಿನಾದ್ಯಂತ ಶಾಲೆಯಿಂದ ಹೊರಗುಳಿದ 2013-14ನೇ ಸಾಲಿನ ಮಕ್ಕಳ ಸಮೀಕ್ಷಾ ಕಾರ್ಯ ನ.6ರಿಂದ ಆರಂಭಿಸಲಾಗುವುದು ಎಂದು ಬಿಇಒ ಅಮರಪ್ಪ ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಸಮೀಕ್ಷಾ ಕಾರ್ಯಕ್ಕೆ ತಾಲೂಕು ಸಮನ್ವಯ ಸಮಿತಿ ರಚಿಸಲಾಗಿದೆ. ತಹಸೀಲ್ದಾರರು ಅಧ್ಯಕ್ಷರಾಗಿರುತ್ತಾರೆ. ತಾವು ಸದಸ್ಯ ಕಾರ್ಯದರ್ಶಿಗಳಾಗಿದ್ದು ತಾಪಂ ಇಒ ಸಹ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಡಯಟ್ನ ನೋಡಲ್ ಅಧಿಕಾರಿ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ 17 ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಎಲ್ಲರ ಸಹಕಾರದೊಂದಿಗೆ ಸಮೀಕ್ಷಾ ಕಾರ್ಯ ನಡೆಯಲಿದೆ.
ಶಾಲಾ ಸಮೀಕ್ಷೆಗಳು ನ.6 ಮತ್ತು 7ರಂದು ನಡೆಯಲಿವೆ. 6-14 ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಹಾಗೂ ಸಾರ್ವತ್ರಿಕವಾಗಿ 8 ವರ್ಷಗಳ ಪ್ರಾಥಮಿಕ ಶಿಕ್ಷಣ ಪೂರೈಸುವವರೆಗೂ ಸೌಲಭ್ಯ ಒದಗಿಸಿ ಶಿಕ್ಷಣ ನೀಡುವುದು ಉದ್ದೇಶವಾಗಿದೆ ಎಂದು ವಿವರಿಸಿದರು.
ಸಂಪನ್ಮೂಲ ಅಧಿಕಾರಿ ವಿರುಪಾಕ್ಷಪ್ಪ ಹುನುಗುಂದ, ಉಪತಹಸೀಲ್ದಾರ್ ರಾಮಣ್ಣ ಹೊಸಮನಿ, ಚಂದ್ರಶೇಖರ ಹಿರೇಮಠ ಇತರರಿದ್ದರು.