ಪ್ರತಿಭೆ ಪ್ರದರ್ಶನಕ್ಕೆ ಯುವಜನೋತ್ಸವ ಸಹಕಾರಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಅ.31
ನಗರದ ದುದ್ದುಪುಡಿ ಕಾಲೇಜಿನಲ್ಲಿ ಪಪೂ ಶಿಕ್ಷಣ ಇಲಾಖೆ ವತಿಯಿಂದ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ರಾಜ್ಯಮಟ್ಟದ ಯುವಜನೋತ್ಸವಕ್ಕೆ ನಗರಸಭೆ ಅಧ್ಯಕ್ಷ ಸೈಯದ್ ಜಾಫರ್‌ಅಲಿ ಜಾಗೀರದಾರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಎನ್ನೆಸ್ಸೆಸ್ ಎಂದರೆ, ಕೇವಲ ಶ್ರಮದಾನ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಯುವಜನೋತ್ಸವದಂತಹ ವಿನೂತನ ಕಾರ್ಯಕ್ರಮವನ್ನು ಆರಂಭಿಸಿರುವುದು ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿ. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಇಂತಹ ಯುವಜನೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.
ಉತ್ತಮ ಕಾರ್ಯಕ್ರಮಕ್ಕೆ ಸಿಂಧನೂರು ನಾಂದಿ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಲ್ಲಯ್ಯ, ಹೈ-ಕ ಭಾಗದಲ್ಲಿ ಎನ್ನೆಸ್ಸೆಸ್‌ನಲ್ಲಿ ಉತ್ತಮ ಕಾರ್ಯಕ್ರಮಗಳ ಆಯೋಜನೆಗೆ ಸಿಂಧನೂರು ನಾಂದಿ ಹಾಡಿದೆ. ಸಿಂಧನೂರು ನಗರ ಎನ್ನೆಸ್ಸೆಸ್‌ಗೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ ಎಂದರು. ಇನ್ನೊಬ್ಬ ಅತಿಥಿ ಗುಲ್ಬರ್ಗ ವಿಭಾಗದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಎಸ್.ಶಿವರಾಜ ಇಲಾಖೆಯ ಎನ್ನೆಸ್ಸೆಸ್ ಕಾರ್ಯಕ್ರಮಗಳ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಸಲಹಾ ಸಮಿತಿ ಸದಸ್ಯ ಎಸ್.ಶರಣೇಗೌಡ, ದುದ್ದುಪುಡಿ ಕಾಲೇಜು ಕಾರ್ಯದರ್ಶಿ ಆರ್.ಸಿ ಪಾಟೀಲ್, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 300 ಸ್ವಯಂ ಸೇವಕಿಯರು 10 ಕಾರ್ಯಕ್ರಮಾಧಿಕಾರಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುದ್ದುಪೂಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಲಗರ ನಾಗೇಶ್ವರರಾವ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದುದ್ದುಪೂಡಿ ವಿದ್ಯಾರ್ಥಿನಿಯರ ಡೊಳ್ಳುಕುಣಿತ ನೆರೆದವರ ಮೈನವಿರೇಳುವಂತೆ ಮಾಡಿತು. ಜ್ಯೋತಿ ಪೂಜಾರಿ ಸ್ವಾಗತಿಸಿದರೆ, ಅನುಷಾ ನಿರೂಪಿಸಿದರು. ಮೇಘಾ ದೇಸಾಯಿ ವಂದಿಸಿದರು.