ಸತತ ಅಧ್ಯಯನದಿಂದ ಯಶಸ್ಸು ಗಳಿಸಲು ಸಾಧ್ಯ
ರಾಯಚೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯಿರಿಸಿಕೊಂಡು ಸತತ ಅಧ್ಯಯನದ ಮೂಲಕ ಯಶಸ್ಸು ಗಳಿಸಲು ಸಾಧ್ಯ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಎ. ಕಾಳೆ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಸತತ ಅಧ್ಯಯನದಲ್ಲಿ ತೊಡಗುವ ಮೂಲಕ ಉನ್ನತ ಶಿಕ್ಷಣಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ನಗರದ ಪೂರ್ವ ವೃತ್ತದ ಸಿಪಿಐ ಚಂದ್ರಶೇಖರ್ ಮಾತನಾಡಿ, ಸತತ ಪರಿಶ್ರಮದ ಅಧ್ಯಯನದಿಂದ ಮಾತ್ರ ಶೈಕ್ಷಣಿಕ ಬದುಕಿನಲ್ಲಿ ಏಳಿಗೆ ಕಾಣಲು ಸಾಧ್ಯ. ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಸಮಯಹಾಳು ಮಾಡದೇ ನಿರಂತರ ಓದು ಹಾಗೂ ಕಲಿಕೆಯಲ್ಲಿ ತೊಡಗುವಂತೆ ಹೇಳಿದರು.
ಸಮಾರಂಭದಲ್ಲಿ ಡಾ. ಶ್ರೀಮಂತ ಹೋಳಕರ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪ್ರೊ. ಪಾಂಡುರಂಗ ಹಾಗೂ ಪ್ರೊ. ಮಹೆಬೂಬ್ ಅಲಿ ಇದ್ದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಮಹಿಪಾಲ ರೆಡ್ಡಿ ವಹಿಸಿದ್ದರು. ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.