ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

28ರಿಂದ ಗೋವಿಂದ ಗಾನ ಕಾರ್ಯಕ್ರಮ

Vishwanath S
Updated On : 2 Sept 2013, 11:46 am

ರಾಯಚೂರು: ಹರಿದಾಸ ಸೇವಾಇಂಟರ್ ನ್ಯಾಷನಲ್ ಟ್ರಸ್ಟ್ ಬೆಂಗಳೂರು ವತಿಯಿಂದ ದಾಸಶ್ರೇಷ್ಠ ಅಸ್ಕಿಹಾಳ ಗೋವಿಂದದಾಸರ ಸ್ಮರಣೋತ್ಸವದ ಅಂಗವಾಗಿ ಸೆ.28 ಮತ್ತು 29ರಂದು ಗೋವಿಂದಗಾನ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ಆಯೋಜಕ ಮುರಳೀಧರ್ ಕುಲಕರ್ಣಿ ಅವರು, ನಗರದ ರಂಗಮಂದಿರದಲ್ಲಿ ಸೆ.28 ಮತ್ತು 29ರಂದು ಗೋವಿಂದ ಗಾನ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಹರಿದಾಸ ಭಜನಾ ಮಂಡಳಿಗಳಿಗೆ ಭಜನೆ ಕಾರ್ಯಕ್ರಮ ಪ್ರಸ್ತುತಪಡಿಸಲು ಅವಕಾಶ. ಒಂದು ಭಜನಾ ಮಂಡಳಿಯಲ್ಲಿ 30 ಜನ ಸದಸ್ಯರಿರಬೇಕು. ಭಜನಾ ಮಂಡಳಿಗಳ ಸದಸ್ಯ ಟಿಟಿಡಿ ಪ್ರಾಜೆಕ್ಟ್ ನವರು ಸೂಚಿಸಿದ ಸಮವಸ್ತ್ರ ಧರಿಸಿ ಪಾಲ್ಗೊಳ್ಳಬೇಕು. ಕಾರ್ಯಕ್ರಮದಲ್ಲಿ ಉತ್ತಮ ಭಜನೆ ಸಂಕೀರ್ತನೆ ಕಾರ್ಯಕ್ರಮ ನಡೆಸಿಕೊಡುವ ತಂಡಕ್ಕೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಸಕ್ತ ಭಜನಾ ಮಂಡಳಿಗಳು ತಮ್ಮ ಹೆಸರನ್ನು ಕಾರ್ಯಕ್ರಮದ ಆಯೋಜಕರಾದ ಮುರಳೀಧರ್ ಕುಲಕರ್ಣಿ, ರವೀಂದ್ರ ಕುಲಕರ್ಣಿ ಅವರನ್ನು ಮೊ. 9448570225, 9449432803 ಇಲ್ಲಿಗೆ ನೋಂದಾಯಿಸಿಕೊಳ್ಳಲು ಮನವಿ ಮಾಡಿದ್ದಾರೆ.
ರಾಜ್ಯ ವಿಜ್ಞಾನ
ಪರಿಷತ್ತಿಗೆ ಆಯ್ಕೆ
ರಾಯಚೂರು: ಕರ್ನಾಟಕ ವಿಜ್ಞಾನ ಪರಿಷತ್ತಿನ ಗುಲ್ಬರ್ಗಾ ವಿಭಾಗದ ಆರು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಡಾ. ಕುಂಟೆಪ್ಪ ಗೌರೀಪುರ ಬಣ ಗೆಲವು ಕಂಡಿದೆ.
ಡಾ. ಕುಂಟೆಪ್ಪ ಗೌರೀಪುರ ಅವರಿಗೆ 1,176 ಮತಗಳು, ಗಿರೀಶ್ ಕಡಲೆವಾಡೆ ಅವರಿಗೆ 1,177 ಮತಗಳು, ಅಣದೂರು ಮಹಾರುದ್ರಪ್ಪ ಅವರಿಗೆ 1,145 ಮತಗಳು, ಪ್ರೊ. ಸಂಗಮೇಶ್ ಹಿರೇಮಠ ಅವರಿಗೆ 1,208 ಮತಗಳು, ಪಂಡಿತ ಕೆ. ಬಾಳೂರೆ ಅವರಿಗೆ 1,137 ಹಾಗೂ ಕೊಟ್ಟೂರುಸ್ವಾಮಿ ಅವರಿಗೆ 1,159 ಮತಗಳು ದೊರೆಯುವ ಮೂಲಕ ವಿರೋಧಿ ಬಣ ಪ್ರೊ. ಸಿ.ಡಿ. ಪಾಟೀಲ್ ಬಣಕ್ಕೆ ಸೋಲಾಗಿದೆ ಎಂದು ಡಾ.ಕುಂಟೆಪ್ಪ ಗೌರೀಪುರ ಅವರು ತಿಳಿಸಿದ್ದಾರೆ.
ಗ್ಯಾರೇಜುಗಳಿಂದ ಮಾಲಿನ್ಯ; ದೂರು
ರಾಯಚೂರು: ನಗರದ ಸಿಯಾತಲಾಬ್ ಪ್ರದೇಶದ ವಾರ್ಡ್ 31ರ ಪ್ರದೇಶದಲ್ಲಿ ವಾಹನಗಳ ಗ್ಯಾರೇಜುಗಳಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಜೈ ಕನ್ನಡ ರಕ್ಷಣಾ ವೇದಿಕೆ ಆರೋಪಿಸಿದೆ. ಈ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಇತ್ತೀಚೆಗೆ ದೂರು ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು, ಸಿಯಾತಲಾಬ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ಯಾರೇಜ್‌ಗಳಲ್ಲಿ ವಾಹನ ದುರಸ್ತಿ ವೇಳೆ ವಾಯುಮಾಲಿನ್ಯದ ಜತೆಗೆ ವಿಪರೀತ ಶಬ್ದಮಾಲಿನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಗ್ಯಾರೇಜುಗಳಿಗೆ ದುರಸ್ತಿಗೆ ಆಗಮಿಸುವ ವಾಹನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲುಗಡೆಯಾಗುತ್ತಿದ್ದು, ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಸಿಯಾತಲಾಬ್ ಪ್ರದೇಶದ ನಿವಾಸಿಗಳಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಸಂಘಟನೆಯ ಅಧ್ಯಕ್ಷ ಈಶ್ವರ್, ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉರುಕುಂದಿ, ಮಹಾದೇವ, ವಿಜಯ ಕುಮಾರ್, ವೆಂಕಟಸ್ವಾಮಿ ಅನೇಕರಿದ್ದರು.
ಇಂದು ರುದ್ರಾಭಿಷೇಕ
ರಾಯಚೂರು: ಶ್ರಾವಣ ಮಾಸದ ಕೊನೆಯ ಸೋಮವಾರದ ದಿನ ಸೆ.2ರಂದು ನಗರದ ಶ್ರೀಶಂಕರಮಠದಲ್ಲಿ ವಿಶೇಷ ರುದ್ರಾಭಿಷೇಕ ಆಯೋಜಿಸಲಾಗಿದೆ. ನಗರದ ಗಾಜಗಾರಪೇಟೆಯ ಶಂಕರ ಮಠದಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರದ ಅಂಗವಾಗಿ ಸಂಜೆ 4ಕ್ಕೆ ವಿಶೇಷ ಪೂಜೆ, ಈಶ್ವರ ದೇವರಿಗೆ ರುದ್ರಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು  ಆದಿಶಂಕರ ಸೇವಾ ಸಮಿತಿ ತಿಳಿಸಿದೆ.
ಕ್ರಿಮಿನಾಶಕ ಸೇವನೆ: ವ್ಯಕ್ತಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಬ್ಯಾಲಿಹಾಳದಲ್ಲಿ ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಶರಣಬಸವ (31) ಎಂಬಾತ ಮೃತಪಟ್ಟಿದ್ದಾರೆ. ಹೊಲದಲ್ಲಿನ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ವೇಳೆ ಪಂಪ್‌ನ ನೌಜಲ್ ಕೆಟ್ಟಿದ್ದರಿಂದ ಅದನ್ನು ಸರಿಪಡಿಸಲು ಬಾಯಿಂದ ಊದುತ್ತಿದ್ದಾಗ ಒಮ್ಮಿಂದೊಮ್ಮಲೇ ಕ್ರಿಮಿನಾಶಕ ಆತನ ಬಾಯಿಯೊಳಗೆ ಪ್ರವೇಶಿಸಿದೆ. ಅಸ್ವಸ್ಥಗೊಂಡ ಆತನನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೇ ಮೃತಪಟ್ಟಿದ್ದಾನೆ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಅನಾರೋಗ್ಯದಿಂದ ಬೇಸತ್ತು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಗುಡದಮ್ಮ(70) ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅದರಿಂದ ಬೇಸತ್ತ ಆಕೆ ಕ್ರಿಮಿನಾಶಕ ಸೇವಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಈ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement