ಅತಿಥಿ, ಜನತೆ ಕೊರತೆ: ವಿಚಾರ ಸಂಕಿರಣ ರದ್ದು
ರಾಯಚೂರು: ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜನಾಂಗದವರ ಮೇಲಿನ ದೌನ್ಯ ತಡೆಗಟ್ಟುವಿಕೆ, ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಪರಿಶಿಷ್ಟ ಜಾತಿ ಪಂಗಡದ ಜನಾಂಗದವರ ಸರ್ವಾಂಗೀಣ ಅಭಿವೃದ್ಧಿಯ ಕುರಿತ ವಿಚಾರ ಸಂಕಿರಣಕ್ಕೆ ಅತಿಥಿಗಳು ಹಾಗೂ ಜನತೆ ಆಗಮನದ ಕೊರತೆಯಿಂದ ಕಾರ್ಯಕ್ರಮ ರದ್ದಾದ ಪ್ರಸಂಗ ನಡೆಯಿತು. ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಉಪನ್ಯಾಸ ಕಾರ್ಯಕ್ರಮ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಆದರೆ ಮಧ್ಯಾಹ್ನ 1 ಗಂಟೆವರೆಗೂ ಅತಿಥಿಗಳೂ ಸೇರಿದಂತೆ ಯಾಮೊಬ್ಬರೂ ರಂಗಮಂದಿರದೆಡೆಗೆ ಸುಳಿಯಲಿಲ್ಲ. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜಿಸಿದ್ದು ಎದ್ದು ಕಂಡಿತು. ಅಗತ್ಯ ಪೂರ್ವಸಿದ್ಧತೆ ಕೊರತೆಯಿಂದಾಗಿ ಕಾರ್ಯಕ್ರಮ ರದ್ದಾಗಿದ್ದು ಸ್ಪಷ್ಟವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಸಮಾಜ ಕಲ್ಯಾಣ ಇಲಾಖೆಯು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದೆ.
ಕಲ್ಮಲಾ: ಇಂದು ಕ್ರೀಡಾಕೂಟ
ರಾಯಚೂರು: ತಾಲೂಕಿನ ಕಲ್ಮಲಾದಲ್ಲಿ ಸೆ. 3ರಂದು ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ರೀಡಾಕೂಟ ಆಯೋಜಿಸಿದ್ದು, ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ ಸೇರಿ ಗ್ರಾಪಂ ಸದಸ್ಯರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಕ್ರೀಡಾಕೂಟದ ಸಮಾರೋಪ ಸಮಾರಂಭ ಜರುಗಲಿದೆ.
ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯಲ್ಲಿ ಕರ್ನಾಟಕ ಸಕಾಲ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಹಾಯಕ ಕೇಂದ್ರ ಹಾಗೂ ಸೈಬರ್ ಕೆಫೆ ನಿರ್ವಹಣೆಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಸೈಬರ್ ಕೆಫೆಗಳ ಮಾಲೀಕರು ಅರ್ಜಿಗಳನ್ನು ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಪಡೆದು ಸೆ.10ರೊಳಗೆ ಸಲ್ಲಿಸಬೇಕು.