ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೆಲೆಯೇರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Lingaraj Badiger
Updated On : 3 Sept 2013, 11:15 am

ಕನ್ನಡಪ್ರಭ ವಾರ್ತೆ, ರಾಯಚೂರು, ಆ.2
ಕೇಂದ್ರದ ಯುಪಿಎ ಸರ್ಕಾರ ನಿರಂತರ ಬೆಲೆ ಏರಿಕೆ ಕೈಗೊಳ್ಳುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕೇಂದ್ರದ ಯುಪಿಎ ಸರ್ಕಾರ ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ದರವನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಜನರಿಗೆ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವೈಫಲ್ಯದಿಂದಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಆರ್ಥಿಕ ಮೌಲ್ಯ ಕುಸಿತ ತಡೆಯುವಲ್ಲಿ ವಿಫಲವಾಗಿದೆ. ಸ್ವತಃ ಆರ್ಥಿಕ ತಜ್ಞರಾಗಿರುವ ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಮಂತ್ರಿ ಚಿದಂಬರಂ ಆರ್ಥಿಕ ಕುಸಿತ ತಡೆಯುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ತೈಲೋತ್ಪನ್ನ ಬೆಲೆ ನಿರಂತರ ಏರಿಕೆ: ಕಳೆದ ಎರಡು ತಿಂಗಳಿನಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಲೇ ಸಾಗಿದೆ. ಪೇಟ್ರೋಲ್ ಬೆಲೆಯನ್ನು 6 ಬಾರಿ ಮತ್ತು ಡೀಸೆಲ್ ಬೆಲೆಯನ್ನು 8 ಬಾರಿ ಏರಿಕೆ ಮಾಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕಳೆದ 8 ತಿಂಗಳಿಂದ ಸುಮಾರು 100ರಷ್ಟು ಹೆಚ್ಚಳ ಮಾಡಿದೆ ಎಂದು ದೂರಿದರು.
ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ: ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿರುವ ಕೇಂದ್ರದ ನಾಯಕರು ಜನಸಾಮಾನ್ಯರ ಬವಣೆಯನ್ನು ಅರಿಯುವ ಪ್ರಯತ್ನ ಮಾಡುತ್ತಿಲ್ಲ. ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವ ಯುಪಿಎ ಸರ್ಕಾರವು ಅಧಿಕಾರಕ್ಕೆ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ಟೀಕಿಸಿದರು. ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹೋರಾಟ ಚುರುಕು: ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಶೀಘ್ರ ಕ್ರಮಕ್ಕೆ ಮುಂದಾಗದಿದ್ದಲ್ಲಿ ಜನಸಾಮಾನ್ಯರೊಂದಿಗೆ ಬಿಜೆಪಿ ಹೋರಾಟ ಚುರುಕುಗೊಳಿಸಲಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಆರ್.ತಿಮ್ಮಯ್ಯ, ಬಂಡೇಶ್ ವಲ್ಕಂದಿನ್ನಿ, ಗಿರೀಶ್ ಕನಕವೀಡು, ರಾಜಕುಮಾರ್, ರಮಾನಂದ ಯಾದವ್, ಎಚ್.ಜಗದೀಶ್, ಅಶ್ವತ್ಥ್, ಚಂದ್ರಶೇಖರ್, ಅಕ್ಬರ್ ಪಾಷಾ, ಬಿ.ಎಸ್. ಸುರಗಿಮಠ, ರಮೇಶ್ ಗುರಮಿಟ್ಕಲ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement