ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವಿರಲಿ: ಬಸವರಾಜ
ಸಿಂಧನೂರು: ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳ್ಳಲು ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಂಕೇತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಬಸವರಾಜ ಕರೆ ನೀಡಿದರು.
ಸಂಕೇತ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇತಿಹಾಸ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ತಿಳಿಯದವ ಇತಿಹಾಸ ನಿರ್ಮಿಸಲಾರ ಎನ್ನುವ ಗಾದೆಯ ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಘಟನೆಗಳನ್ನು ತಿಳಿದುಕೊಳ್ಳಬೇಕು. ಇತಿಹಾಸ ವಿಷಯಗಳನ್ನು ಸರಳವಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲು ಕಾರಣವಾಗುತ್ತದೆ. ಇದೊಂದು ಅತ್ಯುತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಪ್ರಾಚಾರ್ಯ ಶ್ರೀಧರ ಕುಲ್ಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಅನಿಲ್ ರಾಜ್, ಉಪನ್ಯಾಸಕರಾದ ರಾಮಲಿಂಗಪ್ಪ, ಅಮರೇಶ ಅಲಬನೂರು, ರಿಯಾಜ್, ಅಯ್ಯನಗೌಡ ರೌಡಕುಂದಾ, ಉಷಾ ಹಾಗೂ ಇತರರು ಇದ್ದರು.
ಬಹುಮಾನ ವಿತರಣೆ: ಇತಿಹಾಸ ರಸಪ್ರಸ್ನೆ ಸ್ಪರ್ಧೆಯಲ್ಲಿ 4 ತಂಡಗಳು ಭಾಗವಹಿಸಿದ್ದವು. ಚಾಲುಕ್ಯ ಪ್ರಥಮ, ಕದಂಬ ದ್ವಿತೀಯ, ರಾಷ್ಟ್ರಕೂಟ ತಂಡಗಳು ಮೂರನೇ ಸ್ಥಾನ ಪಡೆದವು. ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.