ಗಾದಿಗೆ ಜೆಡಿಎಸ್ ಕಣ್ಣು, 'ಕೈ' ತಳಮಳ
ಕನ್ನಡಪ್ರಭ ವಾರ್ತೆ , ಸಿಂಧನೂರು , ಆ.3
ಕಳೆದ ಬಾರಿ ಅಧಿಕಾರದ ಸವಿ ಉಂಡಿರುವ ಜೆಡಿಎಸ್ ಈ ಬಾರಿ ಕಾಂಗ್ರೆಸ್ ಬಹುಮತ ಪಡೆದಿದ್ದರೂ ಮತ್ತೆ ಗದ್ದುಗೆ ಏರಲು ತೀವ್ರ ಪ್ರಯತ್ನ ನಡೆಸಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ತಳಮಳ ಉಂಟಾಗಿದೆ. ರಾಜಕೀಯ ವಲಯದಲ್ಲಿ ಟ್ವೆಂಟಿ20 ಕ್ರಿಕೆಟ್ ಮ್ಯಾಚ್ನಂತೆ ಕುತೂಹಲ ಮೂಡಿಸಿದೆ.
ಹೊಸ ಲಾಜಿಕ್ ಮೂಲಕ ಜೆಡಿಎಸ್ ಹೇಗಾದರೂ ಮಾಡಿ ಪುನಃ ನಗರಸಭೆಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಇನ್ನಿಲ್ಲದ ಕಸರತ್ತು ಶುರು ಮಾಡಿದೆ. ಇದಕ್ಕೆ ಪುಷ್ಠಿ ಎಂಬಂತೆ ಏನಾಗುತ್ತೋ ಆಗ್ಲಿ ಒಂದು ಚಾನ್ಸ್ ನೋಡೇ ಬಿಡೋಣ ಎಂದು ಜೆಡಿಎಸ್ನ ಶರಣಬಸವ ಗೊರೇಬಾಳ ತರಾತುರಿಯಲ್ಲಿ ಓಡಾಡುತ್ತ ಶತಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ವಲಯದಲ್ಲಿ ತಳಮಳ?: ಕಾಂಗ್ರೆಸ್ಗೆ ಚಳ್ಳೆಹಣ್ಣು ತಿನ್ನಿಸಲು ಜೆಡಿಎಸ್, ಬಿಎಸ್ಸಾರ್ ಕಾಂಗ್ರೆಸ್, ಕೆಜೆಪಿ ಪಕ್ಷಗಳು ಹಾಥ್ ಮಿಲಾಯಿಸಲಿವೆ. ವಿರೋಧ ಪಕ್ಷಗಳ ಸಮೀಕರಣ ಕಾಂಗ್ರೆಸ್ ವಲಯ ಬೆಚ್ಚಿಬೀಳುವಂತೆ ಮಾಡಿದೆ. ಅಧಿಕಾರ ಹಿಡಿಯಲು ಮೂರೂ ಪಕ್ಷಗಳ ಮುಖಂಡರ ವಾಹನಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿವೆ. ಕಾಂಗ್ರೆಸ್ನಲ್ಲಿದ್ದು ಅಧ್ಯಕ್ಷ ಗಾದಿ ಹಿಡಿಯಲು ಕನವರಿಸುತ್ತಿರುವ ಆಕಾಂಕ್ಷಿಗಳು ಮಾತ್ರ ಕೈ ಕೈ ಹೊಸಕಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷ 18 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಹೊಂದಿದೆ. ಜೆಡಿಎಸ್ನವರು ಕಳೆದ ಬಾರಿ ದುರಾಡಳಿತ ನಡೆಸಿರುವುದನ್ನು ಜನತೆ ನೋಡಿ ರೋಸಿ ಹೋಗಿ ತಮ್ಮ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಪುನಃ ಈಗ ಅಧಿಕಾರದ ಗದ್ದುಗೆ ಏರುವ ಹಗಲುಗನಸನ್ನು ಕಾಣುತ್ತಿದ್ದಾರೆ.
ಜೆಡಿಎಸ್ ಕುತಂತ್ರ ನಡೆಯದು: ಕಾಂಗ್ರೆಸ್ನ ಎಲ್ಲ ಸದಸ್ಯರು ಒಗ್ಗಟ್ಟಿನಿಂದಿದ್ದೇವೆ. ಶಾಸಕ ಹಂಪನಗೌಡ ಬಾದರ್ಲಿ ಅವರ ನಿರ್ಣಯವೇ ಅಂತಿಮವಾಗಿದೆ. ಅವರು ಯಾರ ಹೆಸರನ್ನು ಸೂಚಿಸಿದರೂ ಉಳಿದ ಸದಸ್ಯರು ಒಪ್ಪಿ ಅವರನ್ನೇ ಅಧ್ಯಕ್ಷ ಗಾದಿಗೆ ಕೂಡಿಸುತ್ತೇವೆ. ಜೆಡಿಎಸ್ ಪಕ್ಷದವರು ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರಲ್ಲಿ ಹಾಗೂ ಕಾಂಗ್ರೆಸ್ ಪಕ್ಷದವರ ಮಧ್ಯೆ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ಕುತಂತ್ರ ನಡೆಯದು ಎಂದು ನಗರಸಭೆ ಸದಸ್ಯರೂ ಆದ ನಗರಬ್ಲಾಕ್ ಕಾಂಗ್ರೆಸ್ನ ಸೈಯದ ಜಾಫರ್ ಜಾಗೀರದಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.