ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಆ.3
ತಾಲೂಕಿನ ಹೊನ್ನಳ್ಳಿ ಮತ್ತು ಯರಡೋಣಿ ಗ್ರಾಮಗಳಿಗೆ ಸೂಕ್ತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವತಿಯಿಂದ ವಿದ್ಯಾರ್ಥಿಗಳು ಮಂಗಳವಾರ ಘಟಕ ವ್ಯವಸ್ಥಾಪಕ ಬಸವರಾಜ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಹೊನ್ನಳ್ಳಿ ಹಾಗೂ ಯರಡೋಣಿ ಗ್ರಾಮಗಳ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಗಳು ನಿಲ್ಲಿಸುವುದಿಲ್ಲ. ಹಟ್ಟಿ ಚಿನ್ನದ ಗಣಿಯಿಂದ ಬರುವ ಬಸ್ಗಳು ನಿಲ್ಲಿಸುತ್ತವೆ. ಆದರೆ ಬಸ್ಗಳು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತವೆ. ಇದರಿಂದ ಲಿಂಗಸ್ಗೂರು ಪಟ್ಟಣದ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಸಾರಿಗೆ ಘಟಕ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಈ ಬಗ್ಗೆ ಗಮನ ಹರಿಸಿ ಗ್ರಾಮದಿಂದ ಬೆಳಗ್ಗೆ 7-30ಕ್ಕೆ ಹಾಗೂ 9-30ಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ರಸ್ತೆತಡೆ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಸಂಘಟನೆ ತಾಲೂಕು ಕಾರ್ಯದರ್ಶಿ ಮಹೇಶ ರಾಠೋಡ, ಉಪಾಧ್ಯಕ್ಷ ರಮೇಶ ವೀರಾಪೂರ, ಮುಖಂಡರಾದ ಸೋಮನಾಥ, ಮಹಾಂತೇಶ, ಚೌಡಪ್ಪ, ಮಂಜುನಾಥ, ಸಿದ್ಧಲಿಂಗ, ಪ್ರವೀಣ ಕುಮಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.