ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಂಪ್ಸೆಟ್ಟಿಲ್ದೇ ಚಿಮ್ಮಿದ ಬೋರ್ನೀರು!

Vishwanath S
Updated On : 4 Sept 2013, 12:52 pm

ಹುಣಸಗಿ: ಕೊಳವೆಬಾವಿ ನೂರಾರು ಅಡಿ ಕೊರೆದರೂ ನೀರು ಬಾರದಿರುವುದನ್ನು ಕಂಡಿದ್ದೇವೆ. ಆದರೆ ಸಮೀಪದ ವಜ್ಜಲ್ ಗ್ರಾಮದ ಹೊಲವೊಂದರಲ್ಲಿ ತೋಡಿದ ಬೋರ್‌ವೆಲ್‌ನಿಂದ ತನ್ನಿಂದ ತಾನೇ ನೀರು ಚಿಮ್ಮುತ್ತಿದ್ದು, ರೈತರ ಹರ್ಷಕ್ಕೆ ಕಾರಣವಾಗಿದೆ.
ಸಮೀಪದ ವಜ್ಜಲ್ ಗ್ರಾಮದ ಮಲ್ಲನಗೌಡ ಮೇಟಿಗೌಡ್ರ, ಚಂದ್ರಶೇಖರ ಬೋರಮಗುಂಡ, ಚಂದಪ್ಪ ಗಿಂಡಿ, ಮಲ್ಲನಗೌಡ ಅಮಲಿಹಾಳ ಸೇರಿದಂತೆ ಇತರ ರೈತರು ಜಮೀನುಗಳಿಗೆ ನೀರಾವರಿ ಮಾಡಲು ಬೋರ್‌ವೆಲ್ ಕೊರೆಯಿಸಲಾಗಿತ್ತು. ಈಗ ಬೋರ್‌ವೆಲ್‌ಗೆ ಯಾವುದೇ ಯಂತ್ರ ಅಳವಡಿಸದಿದ್ದರೂ ನೀರು ಚಿಮ್ಮುತ್ತಿದೆ. ಸುಮಾರು 5 ಇಂಚು ಗಾತ್ರದ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಸಂತಸಕ್ಕೆ ಕಾರಣವಾಗಿದೆ.
ರೈತನ ಸಂತಸ: ಈ ಕುರಿತು ಮಲ್ಲನಗೌಡ ಮೇಟಿ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ನೀರಿನ ತೊಂದರೆಯಿಂದಾಗಿ ಎರಡನೇ ಬೆಳೆ ಹಾಕಲಾಗದೇ ತುಂಬಾ ತೊಂದರೆಯಾಗಿತ್ತು. ದೇವರ ಮ್ಯಾಲ ಭಾರ ಹಾಕಿ ಬೋರ್‌ವೆಲ್ ಹಾಕಿಸಿನ್ರಿ. ಕಳೆದ ಒಂದು ವಾರದಿಂದ ಇದರಲ್ಲಿ ನೀರು ಬಂದು ತನ್ನಿಂದ ತಾನೇ ಬುಗ್ಗಿಯಂತೆ ಹೊರಚಲ್ಲುತ್ತಿದೆ ಎಂದು ತಿಳಿಸಿದರು. ಕಳೆದ ಎರಡು ವರ್ಷಗಳ ಹಿಂದೆ ಇದೇ ಮಲ್ಲನಗೌಡ ಅವರ ಹೊಲದ ಬಳಿ ಸಿಡಿಲಿನಿಂದ ಕಲ್ಲಿನ ಕಣಿಯಲ್ಲಿ ನೀರು ಬಂದು ಸುದ್ದಿಯಾಗಿತ್ತು.
ನಾರಾಯಣಪುರ ಎಡದಂಡೆ ಕಾಲುವೆಯಿಂದಾಗಿ ಈ ಭಾಗದಲ್ಲಿ ಅಂತರ್ಜಲ ಹೆಚ್ಚಿದ್ದು, ಇದೇ ಕಾರಣದಿಂದ ಬೋರ್‌ವೆಲ್‌ನಲ್ಲಿ ನೀರು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅಂತರ್ಜಲ ಹೆಚ್ಚಳವಾಗಿರುವುದು ಹಾಗೂ ಬೋರ್‌ವೆಲ್‌ನಿಂದ ತನ್ನಿಂದ ತಾನೇ ನೀರು ಬುಗ್ಗಿಯಂತೆ ಚಿಮ್ಮುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement