ಹೊಸ ಪಿಂಚಣಿ ಯೋಜನೆ ಕೈಬಿಡಲು ಆಗ್ರಹಿಸಿ ಮನವಿ
ಸಿಂಧನೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ನೌಕರರ ಒಕ್ಕೂಟ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.
ನಿವೃತ್ತ ವೇತನ ಎಂಬುದು ಕಾನೂನುಬದ್ಧವಾಗಿದ್ದು ಹೊಸ ಪಿಂಚಣಿ ಯೋಜನೆಯು ನೌಕರರಿಗೆ ಮಾರಕವಾಗಿ ಪರಿಣಮಿಸಲಿದೆ. ನಿವೃತ್ತ ವೇತನವು ನೌಕರನ ನಿವೃತ್ತಿ ನಂತರದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ನೀಡುವುದಾಗಿದೆ. ಇದಕ್ಕಾಗಿ ಸರ್ಕಾರ ಹಿಂದೆ ಆಯೋಜಿಸಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಬೇಕು. ಲಾಭಕೋರರಿಗೆ ಅನುಕೂಲವಾಗುವ ಷೇರು ಮಾರುಕಟ್ಟೆಯಲ್ಲಿ ಜೂಜಾಟವಾಡುವ ಆಧಾರಿತ ಅನಿಶ್ಚಿತ ಹೊಸ ಪಿಂಚಣಿ ಯೋಜನೆಯನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನೌಕರರು ಮನವಿಯಲ್ಲಿ ಒತ್ತಾಯಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಚಂದ್ರಶೇಖರ ಕಗ್ಗೋಡ, ಅಧ್ಯಕ್ಷ ದೊಡ್ಡನಗೌಡ ಗುಂಜಳ್ಳಿ, ಪ್ರಧಾನ ಕಾರ್ಯದರ್ಶಿ ಶೇಖರಪ್ಪ ಜಾಲಿಹಾಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರಯ್ಯ ಪತ್ರಿಮಠ, ರಾಜ್ಯ ಸದಸ್ಯ ಎಂ.ಡಿ.ಮೌಲಸಾಬ ಮತ್ತಿತರರು ಇದ್ದರು.