ಕೆಎಸ್‌ಆರ್‌ಪಿ ನೇಮಕಾತಿ ಆದೇಶ ವಿಳಂಬ: ಅಭ್ಯರ್ಥಿಗಳ ಆತಂಕ
ಸಿಂಧನೂರು: ರಾಜ್ಯ ಸರ್ಕಾರ ಕೆ.ಎಸ್.ಆರ್.ಪಿ.ಯ 1258 ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ನಡೆಸಿ 19 ತಿಂಗಳು ಗತಿಸಿದರೂ ಆಯ್ಕೆಯಾದ ನೇಮಕಾತಿ ಆದೇಶ ಹೊರಡಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದು, ಪರೀಕ್ಷೆ ಪಾಸಾಗಿರುವ ಸ್ಥಳೀಯ ಅಭ್ಯರ್ಥಿಗಳಾದ ಲಕ್ಷ್ಮಣ ಗೋನವಾರ, ಭೀಮಪ್ಪ, ಅಯ್ಯಪ್ಪ, ಶಿವಕುಮಾರ, ರಮೇಶ ತೀವ್ರ ಆತಂಕಕ್ಕೀಡಾಗಿದ್ದಾರೆ.
ಪೊಲೀಸ್ ಪೇದೆಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆ ಹಾಗೂ ಸಿಂಧುತ್ವದಲ್ಲಿ ಪಾಸಾದವರ ಅಂತಿಮ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಿಂಧನೂರು ತಾಲೂಕಿನ 10 ಜನ ಹಾಗೂ ರಾಯಚೂರು ಜಿಲ್ಲೆಯ 65 ಜನ ಅಭ್ಯರ್ಥಿಗಳೂ ಸೇರಿದ್ದು, ನೇಮಕಾತಿ ಪ್ರಕ್ರಿಯೆ ಮುಗಿದು ಹಲವು ತಿಂಗಳುಗಳೇ ಕಳೆದರೂ ಅವರ ನೇಮಕಾತಿ ಆದೇಶ ಇನ್ನೂ ಅವರನ್ನು ತಲುಪಿಲ್ಲ.
ಪೊಲೀಸ್ ಇಲಾಖೆಗೆ ಸೇರಿ ನೌಕರಿ ಮಾಡಬೇಕೆಂಬ ನಮ್ಮ ಬಹುದಿನದ ಆಸೆ ಇನ್ನೇನು ಫಲಿಸಿತು ಎನ್ನುವ ಖುಷಿಯಲ್ಲಿ ಪೋಷಕರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಹೇಳಿಕೊಂಡು ಬೀಗುತ್ತಿದ್ದ ನಾವು ಸರ್ಕಾರದ ವಿಳಂಬ ನೀತಿಯಿಂದಾಗಿ ಇದುವರೆಗೂ ಕೆಲಸಕ್ಕೆ ಹೋಗದಿರುವುದಕ್ಕೆ ಹೀಯಾಳಿಕೆಗೆ ಗುರಿಯಾಗಿದ್ದೇವೆ. ಹೀಗಾಗಿ ಊರಿನಲ್ಲಿ ಮುಖಹೊತ್ತು ತಿರುಗುವುದೇ ಕಷ್ಟ ಎಂದು ನೋವು ತೋಡಿಕೊಳ್ಳುತ್ತಾರೆ. ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾದ ಸಿಂಧನೂರಿನ ಲಕ್ಷ್ಮಣ ಗೋನವಾರ ಸರ್ಕಾರ ಕೂಡಲೇ ನೇಮಕಾತಿ ಆದೇಶ ಹೊರಡಿಸಿ ಖಾಲಿ ಕುಳಿತಿರುವ ತಮ್ಮನ್ನು ನೌಕರಿಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಾಮಂಗಳ ಇಂದು
ಸಿಂಧನೂರು: ನಗರ ಸಮೀಪದ ಮೂರುಮೈಲ್ ಕ್ಯಾಂಪ್‌ನಲ್ಲಿರುವ ಬಾಳೆಹೊನ್ನೂರು ಖಾಸಾಶಾಖಾಮಠದಲ್ಲಿ ಸೋಮನಾಥ ಶಿವಾಚಾರ್ಯರು ಲೋಕಲ್ಯಾಣಾರ್ಥ ಕೈಗೊಂಡಿರುವ ಇಷ್ಟಲಿಂಗ ಪೂಜೆ ನಾಳೆ ಸೆ.5 ರಂದು ಮಹಾಮಂಗಲಗೊಳ್ಳಲಿದೆ. ಬೆಳಿಗ್ಗೆ ರೇಣುಕಾಚಾರ್ಯರ ಮೂರ್ತಿಗೆ ಮಹಾಅಭಿಷೇಕ, ಸಹಸ್ರ ಬಿಲ್ವಾರ್ಚಾನೆ, ಮಂಗಳಾರುತಿ ನಂತರ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಶ್ರೀಧರ ಹಿರೇಮಠ ಹಸಮಕಲ್ ಹಾಗೂ ನಾಗಭೂಷಣ ನಡೆಸಿಕೊಡುವರು. ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಠದ ಆಡಳಿತ ಮಂಡಳಿ ಮನವಿ ಮಾಡಿದೆ.