ಹಾಸ್ಟೆಲ್ ಕಾಮಗಾರಿ ವಿಳಂಬ; ತನಿಖೆಗೆ ಆಗ್ರಹ
ರಾಯಚೂರು: ಜಿಲ್ಲೆಯ ಮಾನವಿ ತಾಲೂಕಿನ ಕುರ್ಡಿ ಗ್ರಾಮದ ಬಾಲಕರ ವಸತಿ ನಿಲಯ ಕಾಮಗಾರಿ ನೆನೆಗುದಿಗೆ ಬಿದ್ದು ಸುಮಾರು ಆರು ವರ್ಷಗಳೇ ಕಳೆದಿವೆ. ಕೂಡಲೇ ಕಾಮಗಾರಿ ತನಿಖೆಗೆ ಒಳಪಡಿಸಿ ಸಂಬಂಧಿಸಿದ ಎಂಜಿನೀಯರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ ಕುರ್ಡಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಗ್ರಾಮದ ಬಾಲಕರ ವಸತಿ ನಿಲಯದಲ್ಲಿ 2006ನೇ ಸಾಲಿನಲ್ಲಿ ಕೊಠಡಿ ಮಂಜೂರಾಗಿದ್ದು, ಕಾಮಗಾರಿ ಕಳೆದ 6 ವರ್ಷಗಳ ಹಿಂದೆ ಬೇಸ್‌ಮೆಂಟ್ ಹಾಗೂ 10 ಕಾಲಂಗಳನ್ನು ಹಾಕಲಾಗಿದೆ. ಕಾಮಗಾರಿ ನೆನೆಗುದಿಗೆ ಬೀಳಲು ಕಾರಣವೇನು ಎಂಬುದು ತಿಳಿಯದಾಗಿದೆ.
ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದರೆ ಸುಮಾರು 50 ವಿದ್ಯಾರ್ಥಿಗಳು ವಿಶ್ರಾಂತಿ ಪಡೆಯಬಹುದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಎಂಜಿನೀಯರ್ ಹಾಗೂ ಗುತ್ತೇದಾರರ ಮೇಲೆ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.