ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕರ್ತವ್ಯದ ನಿರ್ಲಕ್ಷ್ಯ ಸಲ್ಲದು: ಗುರುಪಾಟೀಲ್

Vishwanath S
Updated On : 6 Sept 2013, 11:19 am

ಕನ್ನಡಪ್ರಭ ವಾರ್ತೆ, ಶಹಾಪುರ, ಸೆ.5
ಆಸ್ಪತ್ರೆ ಅವ್ಯವಸ್ಥೆ, ಸೂಕ್ತ ಚಿಕಿತ್ಸೆ ನೀಡದಿರುವುದು ಮತ್ತು ವೈದ್ಯರ ನಿಷ್ಕಾಳಜಿ ಕುರಿತು ಸಾರ್ವಜನಿಕರಿಂದ ದಿನನಿತ್ಯ ವ್ಯಾಪಕ ದೂರು ಕೇಳಿಬರುತ್ತಿದ್ದು, ಅವರಿಗೆ ಆಸ್ಪತ್ರೆ ಮತ್ತು ತಮ್ಮ ಮೇಲೆ ವಿಶ್ವಾಸ ಬರುವಂತೆ ಕರ್ತವ್ಯ ನಿರ್ವಹಿಸಲೇಬೇಕು.
- ಇದು ಸರ್ಕಾರಿ ಆಸ್ಪತ್ರೆ ವೈದ್ಯ ಸಿಬ್ಬಂದಿಗೆ ಶಾಸಕ ಗುರುಪಾಟೀಲ್ ಶಿರವಾಳ ನೀಡಿದ ಸ್ಪಷ್ಟ ಸೂಚನೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಇಡೀ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿ ನಂತರ ಮುಖ್ಯ ವೈದ್ಯಾಧಿಕಾರಿಗಳು, ಇತರ ವೈದ್ಯರು ಮತ್ತು ಸ್ಟಾಫ್ ನರ್ಸ್, ಇನ್ನಿತರ ಸಿಬ್ಬಂದಿಗೆ ಹಲವು ಸೂಚನೆಗಳನ್ನು ನೀಡಿದರು.
ಸಾರ್ವಜನಿಕ ಕಳಕಳಿಯಿರಲಿ: ಸಾರ್ವಜನಿಕರ ಸೇವೆ  ಬಗ್ಗೆ ಕಳಕಳಿ ಅಗತ್ಯ. ದೀನರು, ದುರ್ಬಲರು, ಅಸಹಾಯಕರು ಆಸ್ಪತ್ರೆಗೆ ಬಂದಾಗ ಅವರನ್ನು ಮಾನವೀಯತೆಯಿಂದ ಕಂಡು ಇದ್ದ ಸೌಲಭ್ಯ ಬಳಸಿ ಆರೋಗ್ಯ ಸೇವೆ ಕಲ್ಪಿಸಿ ಖಾಸಗಿ ವೈದ್ಯಕೀಯ ವ್ಯವಸ್ಥೆಗಿಂತಲೂ ಸರ್ಕಾರಿ ಆಸ್ಪತ್ರೆ ಸೇವೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವಂತಾಗಲು ಶ್ರಮಿಸಬೇಕು ಎಂದರು.
ಸರ್ಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಿ ಸರ್ಕಾರಿ ಆಸ್ಪತ್ರೆ ಎಂದರೆ ಕೀಳರಿಮೆ ಬಾರದಂತೆ ನೋಡಿಕೊಳ್ಳಬೇಕು. ಮುಖ್ಯ ವೈದ್ಯಾಧಿಕಾರಿಗಳು ನಮಗೇನೂ ಸಂಬಂಧವಿಲ್ಲದಂತೆ ಜವಾಬ್ದಾರಿಯಿಂದ ನುಣಚಿಕೊಂಡರೆ ಸಾಲದು. ಇರುವ ಸಹ ವೈದ್ಯರು, ಸಿಬ್ಬಂದಿ ವಿಶ್ವಾಸ ಪಡೆದು ಸೇವೆ ಕಲ್ಪಿಸಿ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನೊಂದವರಿಗೆ ಸರ್ಕಾರ ಯೋಜನೆ ತಲುಪಿಸಿ: ಎನ್‌ಜಿಒಗಳು ಸ್ವಚ್ಛತೆಯ ಜವಾಬ್ದಾರಿ ಹೊತ್ತಿದ್ದು ಅದರ ಕಾರ್ಯವೈಖರಿ ಬಗ್ಗೆ ಸಡಿಲ ನಿಲುವು ತಾಳದೆ ವೈದ್ಯರು ಸಂಪೂರ್ಣ ನಿಗಾ ವಹಿಸಬೇಕು. ಸರ್ಕಾರದ ಯೋಜನೆ ಮುಚ್ಚಿಡಬಾರದು. ಅಂಗವಿಕಲರಿಗೆ ಅನುಕೂಲ, ಬಾಣಂತಿಯರಿಗೆ ಹಲವಾರು ಸೌಲಭ್ಯಗಳು, ವೃದ್ಧರಿಗೆ ಹಲವು ಯೋಜನೆಗಳು ಸರ್ಕಾರದಿಂದ ಬಂದಿದ್ದರೆ ಅಂಥವುಗಳನ್ನು ಮುಚ್ಚಿಡದೆ ಪಾರದರ್ಶಕವಾಗಿ ನೊಂದವರಿಗೆ ತಲುಪಿಸಬೇಕು. ಯೋಜನೆ ವಿಫಲಗೊಳಿಸಿದರೆ ಸಹಿಸಲಾಗುವುದಿಲ್ಲ ಎಂದರು.
ಕೊರತೆಗಳಿದ್ದರೆ ಗಮನಕ್ಕೆ ತನ್ನಿ: ರೋಗಿಗಳಿಗೆ ಶುದ್ಧ ಕುಡಿಯುವ ಕಲ್ಪಿಸುವತ್ತ ಗಮನ ಹರಿಸಬೇಕು. ಬರುವ ಒಂದೆರಡು ತಿಂಗಳೊಳಗಾಗಿ ಆಸ್ಪತ್ರೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನಿಡುವ ಕೇಂದ್ರವಾಗಬೇಕು. ಕೊರತೆಗಳೇನಾದರು ಇದ್ದಲ್ಲಿ ಗಮನಕ್ಕೆ ತಂದರೆ ಅದನ್ನು ಪೂರೈಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶೌಚಾಲಯ, ಶಸ್ತ್ರಚಿಕಿತ್ಸಾ ಘಟಕಗಳು ಇನ್ನಿತರ ವ್ಯವಸ್ಥೆಗಳನ್ನು ಶಾಸಕರು ಪರಿಶೀಲಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ. ಅನಿಲಕುಮಾರ, ಡಾ. ಜಗದೀಶ ಉಪ್ಪಿನ, ಉಷಾ, ಪುರಸಭೆಯ ಸದಸ್ಯರಾದ ವಸಂತಸುರಪುರ, ದೊಡ್ಡಮಾನಯ್ಯ, ಪ್ರಮುಖರಾದ ಲಾಲಸ ಅಹ್ಮದ್ ಖುರೇಶಿ, ಭೀಮಸೇನರಾವ್ ಶಿರವಾಳ, ಅಮರೇಶಸ್ವಾಮಿ, ಶಿವಪುತ್ರ ಜವಳಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement