ನಾಳೆ ಪುರಾಣ ಮಂಗಲ ಮಹೋತ್ಸವ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಬಿಚ್ಚಾಲಿ ಶ್ರೀಗುರು ಮಹಾಂತೇಶ್ವರ ಪುರಾಣ ಮಂಗಲ ಮಹೋತ್ಸವವು ಸೆ. 7ರಂದು ನಡೆಯಲಿದೆ ಎಂದು ಶ್ರೀಮಠ ಬಿಚ್ಚಾಲಿ ಮತ್ತು ಮಟಮಾರಿ ಸುಕ್ಷೇತ್ರ ಗಬ್ಬೂರು ಗ್ರಾಮದ ಪ್ರಕಟಣೆ ತಿಳಿಸಿದೆ.
ಪುರಾಣ ಮಂಗಲ ಮಹೋತ್ಸವದ ಅಂಗವಾಗಿ ಸೆ. 7ರಂದು ಸಾವಿರ ದೇವರ ಸಂಸ್ಥಾನ ಮಠ ಬಿಚ್ಚಾಲಿ, ಮಟಮಾರಿ ಸುಕ್ಷೇತ್ರ ಗಬ್ಬೂರು ಗ್ರಾಮದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಂದ ಬೆಳಗ್ಗೆ 6ರಿಂದ 10ರವರೆಗೆ ಇಷ್ಟಲಿಂಗ ಮಹಾಪೂಜೆ ಹಾಗೂ 1008 ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಧ್ಯಾಹ್ನ 2ಕ್ಕೆ ಧರ್ಮಸಭೆ ಆಯೋಜಿಸಿದ್ದು, ಸಾನ್ನಿಧ್ಯವನ್ನು ವೀರತಪಸ್ವಿ ವೀರಭದ್ರ ಶಿವಾಚಾರ್ಯರು ವಹಿಸಲಿದ್ದಾರೆ. ಅಧ್ಯಕ್ಷತೆ ಶ್ರೀಬೂದಿ ಬಸವ ಶಿವಾಚಾರ್ಯರು ವಹಿಸುವರು. ಮಾನವಿಯ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು ನೇತೃತ್ವ ವಹಿಸುವರು. ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ಪುರಾಣ ಮಂಗಲ ಮಹೋತ್ಸವದ ಧರ್ಮ ಸಭೆ ನಡೆಯಲಿದೆ.
ಸಮಾರಂಭದಲ್ಲಿ ಜಿಲ್ಲೆಯ ಶಾಸಕರು, ಗಣ್ಯರು ಪ್ರಮುಖರು, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಸಹಾಯಕ ಆಯುಕ್ತೆ ಮಂಜುಶ್ರೀ ಸೇರಿ ಅಧಿಕಾರಿಗಳನೇಕರು ಭಾಗವಹಿಸಲಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.