ತಡೆಯಾಜ್ಞೆ ಮಧ್ಯೆಯೂ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.6
ಮೀಸಲಾತಿಗೆ ಸಂಬಂಧಿಸಿ ಹೈಕೋರ್ಟಿನ ತಡೆಯಾಜ್ಞೆ ಗೊಂದಲದ ಹೊರತಾಗಿಯೂ ಇಲ್ಲಿನ ನಗರಸಭೆಯ ನೂತನ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಮಹಾದೇವಮ್ಮ ತಾಯಣ್ಣ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಪದ್ಮಾ ಶ್ರೀನಿವಾಸ್ ಅವರು ಅವಿರೋಧ ಆಯ್ಕೆಯಾದರು.
ನಗರದಲ್ಲಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈ ಇಬ್ಬರ ಆಯ್ಕೆಯ ವಿಷಯವನ್ನು ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತರೂ ಆಗಿರುವ ಮಂಜುಶ್ರೀ ಅವರು ಪ್ರಕಟಿಸಿದರು.
ಅವಿರೋಧ ಆಯ್ಕೆ: ಆಯ್ಕೆ ಪ್ರಕ್ರಿಯೆಯಲ್ಲಿ ನಿಗದಿತ ಸಮಯದೊಳಗೆ ಬೆಳಗ್ಗೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯೆ ಮಹಾದೇವಮ್ಮ ತಾಯಣ್ಣ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಪದ್ಮಾ ಶ್ರೀನಿವಾಸ್ ಮಾತ್ರ ತಮ್ಮ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಅವಿರೋಧ ಆಯ್ಕೆಯ ಫಲಿತಾಂಶ ಪ್ರಕಟಿಸಲಾಯಿತು.
'ಕೈ' ತಪ್ಪಿದ ಅಧ್ಯಕ್ಷ ಸ್ಥಾನ: ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಹಾಗೆಯೇ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ 'ಎ'ಗೆ ಮೀಸಲಾಗಿತ್ತು. ನಗರಸಭೆಯಲ್ಲಿ ಕಾಂಗ್ರೆಸ್ 14 ಸದಸ್ಯ ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿದ್ದರೂ, ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಪ್ರಕಟಿಸಿದ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ನಿಂದ ಕೈ ತಪ್ಪಿತು. ಪಕ್ಷೇತರ ಸದಸ್ಯೆ ನಗರದ 6ನೇ ವಾರ್ಡಿನ ಮಹಾದೇವಮ್ಮ ತಾಯಣ್ಣ ಅವರ ಪಾಲಾಯಿತು.
'ರಾಜಕೀಯ'ಕ್ಕೆ ಮದ್ದು: ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆಯ ಫಲವಾಗಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಕಂಡುಬಂದಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಪಕ್ಷದ ನಾಯಕರ ಮಧ್ಯೆ ನಡೆದ ಸಭೆಯಲ್ಲಿ ಪದ್ಮಾ ಶ್ರೀನಿವಾಸ್ ಅವರನ್ನು ಮಾತ್ರ ಕಣಕ್ಕಿಳಿಸಲು ನಿರ್ಧರಿಸಲಾಯಿತು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಾ ಶ್ರೀನಿವಾಸ್ ಅವರು ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷೆ ಮಹಾದೇವಮ್ಮ ಮತ್ತು ಉಪಾಧ್ಯಕ್ಷೆ ಪದ್ಮಾ ಶ್ರೀನಿವಾಸ್ ಅವರಿಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ಈ ವೇಳೆ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ನಗರಸಭೆಯ ಅಧಿಕಾರಿಗಳೂ ಕೂಡಾ ಸನ್ಮಾನಿಸಿದರು.
ಬಲಾಬಲ: ಸ್ಥಳೀಯ ನಗರಸಭೆಯಲ್ಲಿ ಕಾಂಗ್ರೆಸ್ನ 14, ಜೆಡಿಎಸ್ನ 9, ಬಿಜೆಪಿಯ 7 ಹಾಗೂ ಐವರು ಪಕ್ಷೇತರ ಸದಸ್ಯರಿದ್ದು, ಯಾವ ಪಕ್ಷಕ್ಕೂ ಸ್ಪಷ್ಟ ಬಹಮತವಿರಲಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಅದಕ್ಕೆ ಮೀಸಲಾತಿ ನಿಗದಿ ಸಂದರ್ಭದಲ್ಲಿ ಪಕ್ಷದಲ್ಲಿನ ಗುಂಪುಗಾರಿಕೆಯ ಫಲವಾಗಿ ಸ್ಥಳೀಯವಾಗಿ ನೆರವಾಗಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ ಪಕ್ಷೇತರರ ಪಾಲಾಗಿದ್ದು ರಾಜಕೀಯ ಕಿತ್ತಾಟಕ್ಕೆ ಸಾಕ್ಷಿಯಾಯಿತು.
ಗೊಂದಲದಿಂದ ದೂರ: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ವಿಚಾರ ಗುರುವಾರ ರಾತ್ರಿಯಿಂದಲೇ ಹರಡಿದ್ದರಿಂದ ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಲು ಮನಸು ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ಗೆ ಉಪಾಧ್ಯಕ್ಷ ಸ್ಥಾನ ಒಲಿಯಿತು.
ಸಂಭ್ರಮ: ನಗರಸಭೆಯ ಅಧ್ಯಕ್ಷೆಯಾಗಿ ಮಹಾದೇವಮ್ಮ ಮತ್ತು ಉಪಾಧ್ಯಕ್ಷೆಯಾಗಿ ಪದ್ಮಾ ಶ್ರೀನಿವಾಸ್ ಅವರು ಆಯ್ಕೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಸಂಭ್ರಮಾಚರಿಸಿದರು.