ಬೆಳೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ?
ಸಿಂಧನೂರು: ತಾಲೂಕಿನ ಗದ್ರಟಗಿ ಗ್ರಾಮ ಲೆಕ್ಕಾಧಿಕಾರಿಗಳ ವ್ಯಾಪ್ತಿಯ ಹೊಗರನಾಳ, ಗುಡಿಹಾಳ ಮತ್ತಿತರ ಗ್ರಾಮಗಳಲ್ಲಿ ಬೆಳೆ ಪರಿಹಾರದ ಹಿನ್ನೆಲೆಯಲ್ಲಿ ರೈತರಿಗೆ 1 ಸಾವಿರ ಮೌಲ್ಯದ ಚೆಕ್ ವಿತರಿಸಲಾಗುತ್ತಿದ್ದು, ಕೆಲವರಿಗೆ ಎರಡೆರಡು ಚೆಕ್ ನೀಡಲಾಗುತ್ತಿದೆ ಎಂದು ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. 5 ಎಕರೆ ಜಮೀನಿಗಿಂತ ಕಡಿಮೆ ಆಸ್ತಿಯನ್ನು ಹೊಂದಿರುವ ರೈತರಿಗೆ ಬೆಳೆ ವಿಮೆಯನ್ನು ನೀಡಲಾಗುತ್ತಿದ್ದು, ಒಬ್ಬರೇ ಹೆಸರಿನಲ್ಲಿ ಎರಡೆರಡು ಸರ್ವೆ ನಂಬರ್‌ಗಳಿದ್ದರೆ ಅಂತಹ ಜಮೀನುಗಳ ಮಾಲೀಕರಿಗೆ ಎರಡೆರಡು ಚೆಕ್‌ಗಳನ್ನು ಕೊಡಲಾಗಿದೆ. ನಿಜವಾಗಿಯೂ ಸಣ್ಣ ರೈತರಿದ್ದಾಗ್ಯೂ ಒಂದೇ ಕುಟುಂಬದಲ್ಲಿ ಎರಡೆರಡು ಚೆಕ್‌ಗಳನ್ನು ಕೊಡಲು ಬರುವುದಿಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಬರುತ್ತಾರೆ. ಹಣ ಕೊಟ್ಟರೆ ಯಾವ ನಿಯಮಗಳೂ ಅಡ್ಡ ಬರುವುದಿಲ್ಲ. ಹೀಗಾಗಿ ಬೆಳೆ ಪರಿಹಾರ ವಿತರಣೆಯಲ್ಲಿ ಗ್ರಾಮ ಲೆಕ್ಕಾಧಿಕರಿಗಳು ಅಪಾರ ಅವ್ಯಹಾರದಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ಮುಖಂಡ ರಾಜಶೇಖರ ಬಳ್ಳಾರಿ ಆಪಾದಿಸಿದ್ದಾರೆ. ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಹಸೀಲ್ದಾರರು ಕಂದಾಯ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಪಿಂಚಣಿ ಅದಾಲತ್
ಹುಣಸಗಿ: ಪಟ್ಟಣದ ವಿಶೇಷ ತಹಸೀಲ್ದಾರ ಕಚೇರಿಯಲ್ಲಿ ಸಹಾಯಕ ಆಯುಕ್ತ ಬಿ.ಪಿ. ವಿಜಯ್ ಅವರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಅದಾಲತ್ ನಡೆಸಿ ಪಿಂಚಣಿದಾರರ ಮೂಲ ದಾಖಲಾತಿ ಪರೀಶೀಲಿಸಿದರು. 2011- 12ರಲ್ಲಿ ಪಿಂಚಣಿದಾರರ ಸರ್ವೇ ಮಾಡಲಾಗಿತ್ತು, ಆ ಸಮಯದಲ್ಲಿ ಕೆಲವು ಪಿಂಚಣಿದಾರರು ಎರಡು ಕಡೆ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಸರ್ಕಾರ ಮಾಸಾಶನ ತಡೆ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ಆದೇಶ ಪತ್ರ ನೀಡಿದರು. ಸರ್ಕಾರದ ವಿವಿಧ ಯೋಜನೆಯಾದ ಅಂಗವಿಕಲ, ವೃದ್ಧಾಪ್ಯ, ವಿಧವಾ ಹಾಗೂ ಸಂಧ್ಯಾಸುರಕ್ಷಾ ಯೋಜನೆಗಳ ಫಲಾನುಭವಿಗಳ ದಾಖಲಾತಿ ಪರಿಶೀಲಿಸಿ, ಸ್ಥಳದಲ್ಲಿಯೇ ಬಂದತಹ ಸುಮಾರು 23 ಅರ್ಜಿಗಳಿಗೆ ಆದೇಶ ಪತ್ರ ನೀಡಿದರು. ಹುಣಸಗಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 36 ಹಳ್ಳಿಗಳಿದ್ದು, ಹೊಸ ಅರ್ಜಿಗಳಿಗೆ ಮೂಲ ದಾಖಲಾತಿ ಪರೀಶೀಲಿಸಿ ನಂತರ ಆದೇಶ ಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸಲಿಂಗಪ್ಪ, ಸಿಬ್ಬಂದಿ ಗುರಲಿಂಗಯ್ಯ, ಪ್ರವೀಣ, ಅಂಬ್ರೀಶ, ಜಗದೀಶ, ಸುಮಂಗಲಾ ಇದ್ದರು.
--