ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬಸ್ ತಡೆ; ಲಾಠಿ ಪ್ರಹಾರ

Vishwanath S
Updated On : 8 Sept 2013, 12:02 pm

ಸಿಂಧನೂರು: ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ವೇಗದೂತ ಬಸ್‌ಗಳು ನಿಲ್ಲುತ್ತಿಲ್ಲವೆಂದು ಗಲಾಟೆ ಮಾಡಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ನಿಲ್ಲಿಸಿದ್ದರಿಂದ ಶಹರ ಪೊಲೀಸ್ ಠಾಣೆ ಪಿಎಸ್‌ಐ ಬಾಳನಗೌಡ ಲಾಠಿ ರುಚಿ ತೋರಿಸಿದಾಗ ವಿದ್ಯಾರ್ಥಿಗಳು ಕಾಲಿಗೆ ಬುದ್ಧಿ ಹೇಳಿದ ಘಟನೆ ಜರುಗಿತು.
ಪ್ರತಿನಿತ್ಯ ವಿವಿಧ ಗ್ರಾಮೀಣ ಪ್ರದೇಶಗಳಿಂದ ಬರುವ ಕೆಲ ಪುಂಡ ವಿದ್ಯಾರ್ಥಿಗಳು ಒಂದಿಲ್ಲ ಒಂದು ಕಾರಣಕ್ಕೆ ಬಸ್‌ನಿಲ್ದಾಣದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಬೆಳಗಿನ 7 ರಿಂದ 8 ಘಂಟೆಗೆ ಬರುವ ವಿದ್ಯಾರ್ಥಿಗಳು ಸಣ್ಣಪುಟ್ಟ ಕಾರಣಗಳಿಗಾಗಿ ಜಗಳ ತೆಗೆಯುತ್ತಾರೆ. ಇನ್ನೂ ಕೆಲವರು ವಿರಹ ಪ್ರೇಮಕ್ಕಾಗಿ, ಕೆಲವರು ಅಮರ ಪ್ರೇಮಕ್ಕಾಗಿ ಪ್ಯಾಂಟ್ ಬೆಲ್ಟ್ ಬಿಚ್ಚಿ  ಹಿಡಿದರೆ, ಇನ್ನೂ ಕೆಲವರು ಕೈಯಲ್ಲಿ ಕಲ್ಲುಗಳನ್ನು ಹಿಡಿದು ತಮ್ಮ ವೀರಾವೇಶವನ್ನು ಹುಡುಗಿಯರ ಎದುರಿಗೆ ಪ್ರದರ್ಶಿಸುತ್ತಿದ್ದಾರೆ. ಮತ್ತೇ ಕೆಲವರು ಚಾಲಕರು, ನಿರ್ವಾಹಕರೊಂದಿಗೆ ಬಸ್ ನಿಲುಗಡೆಗೆ ಜಗಳ ತೆಗೆದು ನಿಲ್ದಾಣದಲ್ಲಿ ರಣರಂಗವನ್ನೇ ಮಾಡುತ್ತಿದ್ದಾರೆ.
ಕಾಲೇಜುಗಳ ಆಡಳಿತ ಮೇಲೂ ಪರಿಣಾಮ: ಕಾಲೇಜ್ ಬಿಟ್ಟ ನಂತರವು ಕೆಲ ಪೋಕರಿ ವಿದ್ಯಾರ್ಥಿಗಳ ವರ್ತನೆ ಹದ್ದು ಮೀರಿ ನಡೆಯುತ್ತಿದೆ. ಕಾಲೇಜಿನ ಸಮವಸ್ತ್ರಗಳನ್ನು ಧರಿಸಿಯೇ ಜಗಳಕ್ಕೆ ನಿಲ್ಲುವುದರಿಂದ ಕೆಲ ಕಾಲೇಜುಗಳ ಆಡಳಿತ ಮಂಡಳಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ.
ನಿಲ್ದಾಣದಲ್ಲಿ ಹೂ, ಹಣ್ಣು ಮಾರುವ ಅಂಗಡಿಕಾರರು ಈ ವಿದ್ಯಾರ್ಥಿಗಳ ಜಗಳದಿಂದಾಗಿ ಬೇಸತ್ತುಕೊಂಡಿದ್ದಾರೆ. ಇವರು ಸಾಲಿ ಕಲಿಯಲು ಊರಿಗೆ ಬರುತ್ತಾರೋ.....ಜಗಳ ಮಾಡಲು ಬರುತ್ತಾರೋ......ಕಾಲೇಜಿನಲ್ಲಿ ಇದನ್ನೇ ಹೇಳಿಕೊಡುತ್ತಾರೋ ಎಂದು ಬೈಯ್ದಾಡಿಕೊಳ್ಳುವುದು ಸಾಮಾನ್ಯ. ಕೆಲ ಕಾಲೇಜುಗಳ ಆಡಳಿತ ಮಂಡಳಿ ಕೆಲ ವಿದ್ಯಾರ್ಥಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಂಡರೂ ಇವರ ಅಟ್ಟಹಾಸ ಕಡಿಮೆಯಾಗಿಲ್ಲ.
  ಸಿಂಧನೂರು ನಗರ ಠಾಣೆಗೆ ನೂತನವಾಗಿ ಆಗಮಿಸಿರುವ ಬಾಳನಗೌಡರು ತೋರಿಸಿದ ಲಾಠಿ ರುಚಿಯನ್ನು ಕನಿಷ್ಠ ಒಂದು ವಾರ ಮುಂದುವರೆಸಿದರೆ ಪುಂಡ ವಿದ್ಯಾರ್ಥಿಗಳ ಉಪಟಳ ಕಡಿಮೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಬಾಳಣ್ಣ ಹೆಜ್ಜೆ ಇಡಬೇಕಾಗಿದೆ. ಜೊತೆಗೆ ಡಿಪೋ ಮ್ಯಾನೇಜರ್ ಕರೇಗೌಡ ಅವರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೂ ಪ್ರಾಮಾಣಿಕವಾಗಿ ಸ್ಪಂದಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement