'ಪುರಾತತ್ವ ಇಲಾಖೆ ಕಚೇರಿ ಆರಂಭಿಸಿ'
ಲಿಂಗಸ್ಗೂರು: ಐತಿಹಾಸಿಕ ಪ್ರಸಿದ್ಧ ರಾಯಚೂರು ಜಿಲ್ಲೆಯಲ್ಲಿ ಪುರಾತತ್ವ ಇಲಾಖೆ ಕಚೇರಿ ಆರಂಭಿಸಬೇಕು ಹಾಗೂ ಮುದಗಲ್ ಉತ್ಸವ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ರಾಯಚೂರು ಜಿಲ್ಲೆ ದೋ-ಆಬ್ ಪ್ರದೇಶವೆಂದು ಖ್ಯಾತಿ ಪಡೆದಿದ್ದು, ಲಿಂಗಸ್ಗೂರು ತಾಲೂಕಿನಲ್ಲಿ ವಿಜಯನಗರ ಅರಸರ ಕಾಲದ ಮುದಗಲ್‌ನ ಎರಡು ಸುತ್ತಿನ ಕೋಟೆಯ ಮುಖ್ಯದ್ವಾರ, ಗೋಡೆ, ಕಮಾನು ಸೇರಿದಂತೆ ಕೋಟೆ ಕೊತ್ತಲಗಳು ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತದಲ್ಲಿವೆ. ಮಸ್ಕಿಯಲ್ಲಿ ದೇವನಾಂಪ್ರೀಯ ಸಾಮ್ರಾಟ ಅಶೋಕನ ಶಿಲಾಶಾಸನವಿರುತ್ತದೆ. ಕದಂಬರ ಕಾಲದ ದೇಗುಲಗಳು, ದಾರ್ಶನಿಕ ಸ್ಥಳಗಳಿವೆ.
ಆದ್ದರಿಂದ ತಾಲೂಕಿನ ಮುದಗಲ್ ಕೋಟೆ ಜೀರ್ಣೋದ್ಧಾರಗೊಳಿಸಬೇಕು. ಹಂಪಿ ಹಾಗೂ ಆನೆಗುಂದಿ ಉತ್ಸವದಂತೆ ಸರ್ಕಾರ ಮುದಗಲ್ ಉತ್ಸವ ಆಚರಣೆಗೆ ಮುಂದಾಗಬೇಕು. ಅಶೋಕ ಶಿಲಾಶಾಸನವಿರುವ ಮಸ್ಕಿ, ಜಲದುರ್ಗ ಕೋಟೆ ರಕ್ಷಣೆ ಮಾಡಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಡಿಸಬೇಕು. ಗುರುಗುಂಟಾ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಪಡಿಸಿ ಧಾರ್ಮಿಕ ಸ್ಥಳವನ್ನು ಪ್ರೇಕ್ಷಣೀಯ ಪ್ರವಾಸಿ ತಾಣವಾಗಿಸಬೇಕು. ತಾಲೂಕು ಸೇರಿದಂತೆ ಜಿಲ್ಲೆಯ ಐತಿಹಾಸಿಕ ಸ್ಮಾರಕ, ಶಿಲಾಶಾಸನಗಳನ್ನು ಸಂರಕ್ಷಿಸಿ ಅವುಗಳ ಜೀರ್ಣೋದ್ಧಾರ ಮಾಡುವ ನಿಟ್ಟಿನಲ್ಲಿ ಪ್ರಾಚ್ಯವಸ್ತು ಇಲಾಖೆ ಕಚೇರಿ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ, ಎಸ್.ಎ.ನಯೀಮ್, ಶಿವರಾಜ ನಾಯಕ, ಅಜೀಜ್ ಪಾಶಾ, ಆಂಜನೇಯ ಭಂಡಾರಿ, ಅಮರೇಶ ನಾಯಕ, ಚಂದಪ್ಪ ಕಟ್ಟಿಮನಿ, ರಾಘವೇಂದ್ರ, ಯಲ್ಲಪ್ಪ, ರಾಜು, ಲಕ್ಷ್ಮಣ ಸೇರಿದಂತೆ ಇದ್ದರು.