ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾನವಿ ಪುರಸಭೆ, ಸಿಂಧನೂರು ನಗರಸಭೆ 'ಕೈ'ವಶ

Vishwanath S
Updated On : 8 Sept 2013, 12:01 pm

ಕನ್ನಡಪ್ರಭ ವಾರ್ತೆ  ರಾಯಚೂರು  ಸೆ.7
ಜಿಲ್ಲೆಯ ಮಾನವಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಶನಿವಾರ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸೈಯದ್ ನಜೀರುದ್ದೀನ್ ಖಾದ್ರಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ದೊಡ್ಡಬಸಪ್ಪ ಅವರು ಅವಿರೋಧ ಆಯ್ಕೆಯಾದರು.
ಈ ಕುರಿತು ಮಾನವಿ ಪಟ್ಟಣದ ಪುರಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಮೋಹನ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.
ಅವಿರೋಧ ಆಯ್ಕೆ: ಆಯ್ಕೆ ಪ್ರಕ್ರಿಯೆಯಲ್ಲಿ ನಿಗದಿತ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸೈಯದ್ ನಜೀರುದ್ದೀನ್ ಖಾದ್ರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಬಸಪ್ಪ ಅವರು ಮಾತ್ರ ತಮ್ಮ ನಾಮಪತ್ರ ಸಲ್ಲಿಸಿದ್ದರು.
  ಈ ಎರಡೂ ಸ್ಥಾನಗಳಿಗೆ ಇತರೆ ಪಕ್ಷದವರು ನಾಮಪತ್ರ ಸಲ್ಲಿಸದ ಕಾರಣ ಅಂತಿಮವಾಗಿ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯ ಫಲಿತಾಂಶ ಪ್ರಕಟಿಸಿದರು.
ಮಾನವಿ ಪುರಸಭೆಯ ಒಟ್ಟು 23 ಸದಸ್ಯ ಬಲವಿದ್ದು, ಅದರಲ್ಲಿ 18 ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಐವರು ಸದಸ್ಯರು ಸಭೆಯಿಂದ ದೂರವುಳಿದರು. ಪಕ್ಷೇತರ ಸದಸ್ಯ ರಾಜಾ ಶ್ಯಾಮಸುಂದರ ನಾಯಕ ಅವರು ಪಕ್ಷೇತರರಾಗಿಯೇ ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ತಿಳಿಸಿದರು.
ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಂದಿರಲಿಲ್ಲ: ಕಳೆದ ಮಾರ್ಚ್‌ನಲ್ಲಿ ನಡೆದ ಮಾನವಿ ಪುರಸಭೆಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ.
 ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪುರಸಭೆ ಆಡಳಿತವನ್ನು ಕಾಂಗ್ರೆಸ್ ವಶಕ್ಕೆ ತೆಗೆದುಕೊಳ್ಳಲು ಮೊದಲಿಗೆ ಪಕ್ಷೇತರ ಸದಸ್ಯರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಮುಂದಾಗಿ ಯಶಸ್ವಿಯಾಗುವ ಮೂಲಕ ಪಕ್ಷದ ಬಲವನ್ನು 8ರಿಂದ 12ಕ್ಕೇರಿಸಿಕೊಂಡರು.
ಚದುರಂಗದಾಟದಲ್ಲಿ ಯಶಸ್ಸು: ಅದಲ್ಲದೇ ಎದುರಾಳಿಗಳು ಮತ್ತೇ ಚಾಣಾಕ್ಷತನ ಪ್ರದರ್ಶಿಸದಂತೆ ಬಿಎಸ್ಸಾರ್ ಕಾಂಗ್ರೆಸ್ ಮತ್ತು ಕೆಜೆಪಿಯ ಒಬ್ಬರು ಸದಸ್ಯರು, ಬಿಜೆಪಿ 2, ಜೆಡಿಎಸ್‌ನ ಒಬ್ಬ ಸದಸ್ಯರ ಒಲವು ಗಳಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ನಾಯಕರು ಒಟ್ಟು 17 ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ನೂತನ ಅಧ್ಯಕ್ಷರ ಆಯ್ಕೆ ನಂತರದಲ್ಲಿ ಇದುವರೆಗೆ ಮಾನವಿ ಪುರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ನೂತನ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಪ್ರಗತಿಗೆ ಪ್ರಯತ್ನ: ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿ, ಮಾನವಿ ಪಟ್ಟಣದಲ್ಲಿ ಮೂಲಸೌಲಭ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಶಾಸಕ ಹಂಪಯ್ಯ ನಾಯಕ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ, ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.
ವಿಜಯೋತ್ಸವ: ಮಾನವಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ನಂತರ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
 ಕಾಂಗ್ರೆಸ್ ನಾಯಕ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಂಬಂಧಪಟ್ಟವರು ಆಯ್ಕೆಗೊಂಡವರನ್ನು ಅಭಿನಂದಿಸುತ್ತಿದ್ದ ದೃಶ್ಯ ಕಂಡುಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement